Home Blog Page 817

ಭಾರತ : 6, 977 ಹೊಸ ಕೋವಿಡ್-19 ಪ್ರಕರಣಗಳು ದಾಖಲು, ಸೋಂಕಿತರ ಸಂಖ್ಯೆ 1,38,845 ಲಕ್ಷಕ್ಕೆ ಏರಿಕೆ

0

ನವದೆಹಲಿ: ಸತತ ನಾಲ್ಕನೇ ದಿನವಾದ ಇಂದು ಕೂಡಾ  ದೇಶದಲ್ಲಿ  ಹೆಚ್ಚಿನ  6, 977 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 38 ಸಾವಿರದ 845ಕ್ಕೆ ಏರಿಕೆ ಆಗಿದೆ. 154 ಮಂದಿ ಸಾವಿನೊಂದಿಗೆ ಒಟ್ಟು ಸಾವಿನ ಸಂಖ್ಯೆ 4 ಸಾವಿರದ 21 ಆಗಿದೆ. ಈ ಮೂಲಕ ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಭಾರತ ಎಂಟ್ರಿ ಆಗಿದೆ. 

ಸಕ್ರಿಯ ಸೋಂಕಿತ ಪ್ರಕರಣಗಳು 77 ಸಾವಿರಕ್ಕೆ ಏರಿಕೆ ಆಗಿದೆ. ಮುಂಬೈಯಲ್ಲಿ ತೀವ್ರ ರೀತಿಯ ಅನಾರೋಗ್ಯಕ್ಕೊಳಗಾದವರಿಗೆ ಅನೇಕ ಆಸ್ಪತ್ರೆಗಳಲ್ಲಿ ಐಸಿಯು, ತುರ್ತು ನಿಗಾ ಘಟಕಗಳೇ ಇಲ್ಲ ಎಂಬ ವರದಿಗಳ ಹೊರತಾಗಿಯೂ, ಸ್ವಲ್ಪ ಪ್ರಮಾಣದ ರೋಗಿಗಳು ಮಾತ್ರ ಐಸಿಯು, ಅಕ್ಸಿಜನ್ ಅಥವಾ ವೆಂಟಿಲೇಟರ್ ನೆರವಿನಲ್ಲಿದ್ದಾರೆ ಎಂದು ಕೇಂದ್ರಸರ್ಕಾರ ಹೇಳುತ್ತಿದೆ. 

ಈ ಮಧ್ಯೆ ದೇಶದಲ್ಲಿ 432 ಸಾರ್ವಜನಿಕ, 178 ಖಾಸಗಿ ಲ್ಯಾಬ್ ಸೇರಿದಂತೆ ಒಟ್ಟು 610 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 1.1 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ. 

ಪ್ರತಿದಿನ ಸುಮಾರು 1.4 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವಿದ್ದು, ಅದನ್ನು 2 ಲಕ್ಷ ಮಾದರಿಗಳಿಗೆ ಏರಿಕೆ ಮಾಡಲಾಗುವುದು, ಬಹುತೇಕ ರಾಜ್ಯಗಳು ರಾಷ್ಟ್ರೀಯ ಕ್ಷಯ ರೋಗ ಮುಕ್ತ ಕಾರ್ಯಕ್ರಮದಡಿ ಕೋವಿಡ್-19 ಮಾದರಿಗಳ ಪರೀಕ್ಷೆಗೆ  ಟ್ರೂನಾಟ್ ಯಂತ್ರಗಳನ್ನು ನಿಯೋಜಿಸಿರುವುದಾಗಿ ಸಮಿತಿ ಹೇಳಿದೆ.

ಈ ಯಂತ್ರಗಳ ಹೊರತಾಗಿಯೂ ಖಾಸಗಿ ಮತ್ತು ಸಾರ್ವಜನಿಕ ಲ್ಯಾಬ್ ಗಳು ಇಲ್ಲದ ಜಿಲ್ಲೆಗಳಲ್ಲಿ ಆಧುನಿಕ ವೈರಾಣು ಪ್ರಯೋಗಾಲಯಗಳ ಮೂಲಕ ಪರೀಕ್ಷೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಯಾವುದೇ ರಾಜ್ಯದಲ್ಲೂ ಪರೀಕ್ಷಾ ಮೂಲಸೌಕರ್ಯದ ಸಮಸ್ಯೆಯಾಗಿಲ್ಲ ಎಂದು ಐಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ.

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಕೊಲೆ, ಆರೋಪಿ ಪೊಲೀಸ್ ವಶಕ್ಕೆ

0

ಮೈಸೂರು: ಕ್ಷುಲ್ಲಕ‌ ಕಾರಣಕ್ಕೆ ವ್ಯಕ್ತಿಯೋರ್ವ ಇಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಜಯಪುರ ಹೋಬಳಿಯ ಕೋಟೆಹುಂಡಿ ಸಮೀಪ‌ ಭಾನುವಾರ ರಾತ್ರಿ ನಡೆದಿದೆ.

ಯಡಹಳ್ಳಿ ಗ್ರಾಮದ ಟಿ.ಮಂಜುನಾಥ್ (33) ಹಾಗೂ ಆರ್.ಮಂಜುನಾಥ್ (35) ಕೊಲೆಯಾದವರು. 

ಕೋಟೆ ಹುಂಡಿಯ ನಿವಾಸಿ ಯೋಗೇಶ್(23) ಎಂಬಾತ ಇಬ್ಬರನ್ನು ಕೊಲೆ ಮಾಡಿದ್ದು, ಸೋಮವಾರ ನಸುಕಿನ ಜಾವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೋಟೆಹುಂಡಿ ಸಮೀಪದ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಸರಕು ಸಾಗಣೆ ಆಟೋ ಒಂದರಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಹಾಗೂ ಮೂರ್ತಿ ಎಂಬುವವರು ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಆರೋಪಿ ಯೋಗೇಶ್ ಕೂಡ ಪ್ಯಾಸೆಂಜರ್ ಆಟೋದಲ್ಲಿ ಬರುತ್ತಿದ್ದನು. ಈ ಸಂದರ್ಭದಲ್ಲಿ ಎರಡೂ ವಾಹನಗಳೂ ಪರಸ್ಪರ ಉಜ್ಜಿಕೊಂಡು ಹೋಗಿವೆ. ಈ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದು ಯೋಗೇಶ್ ಚಾಕುವಿನಿಂದ ಟಿ.ಮಂಜುನಾಥ್ ಹಾಗೂ ಆರ್.ಮಂಜುನಾಥ್ ಅವರಿಗೆ ಇರಿದು ಕೊಲೆ ಮಾಡಿದ್ದಾನೆ. ಹೇಗೋ ಮೂರ್ತಿ ಎಂಬುವವರು ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಘಟನೆಯಲ್ಲಿ ಟಿ.ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರ್‌‌.ಮಂಜುನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ಮದ್ಯಪ್ರಿಯರಿಂದ ಕರ್ನಾಟಕಕ್ಕೆ ಕೊರೋನಾ ಭೀತಿ: ರಾಜ್ಯಕ್ಕೆ ನುಸುಳಿ ಮದ್ಯ ಖರೀದಿ!

0

ಮೈಸೂರು: ಲಾಕ್ ಡೌನ್ ತೆರವುಗೊಳಿಸಿ, ಜನಜೀವನ ಸಾಮಾನ್ಯಕ್ಕೆ ಮರಳುತ್ತಿರುವುದು ಒಂದೆಡೆಯಾದರೆ ಕರ್ನಾಟಕಕ್ಕೆ ಗಡಿ ಭಾಗಗಳಿಂದ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 

ಕೇರಳದ ಕುಡುಕರಿಂದ ಪ್ರಮುಖವಾಗಿ ಕರ್ನಾಟಕಕ್ಕೆ ಕೊರೋನಾಘತದ ಭೀತಿ ಉಂಟಾಗಿದೆ. ಗಡಿ ಪ್ರದೇಶದ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲಿರುವ ಹಿನ್ನೆಲೆಯಲ್ಲಿ ಕೇರಳದ ಮದ್ಯಪ್ರಿಯರು ಮದ್ಯ ಖರೀದಿಸಲು ಕರ್ನಾಟಕಕ್ಕೆ ನುಸುಳಲು ನದಿಗಳ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಮದ್ಯ ಅಗ್ಗದ ದರದಲ್ಲಿ ಸಿಗುವುದರಿಂದ ಕೇರಳದಿಂದ ಬೋಟ್ ಗಳಲ್ಲಿ ಜನರು ಆಗಮಿಸಿ ಮದ್ಯ ಖರೀದಿಸುತ್ತಿದ್ದಾರೆ. 

ಕಬಿನಿ ನದಿಯ ವ್ಯಾಪ್ತಿ ಉದ್ದವಿರುವುದರಿಂದ ಗಡಿ ಭಾಗದ ಗ್ರಾಮಗಳಿಗೆ ನುಸುಳಲು ಹಲವಾರು ಪ್ರವೇಶಗಳಿವೆ. ಗಡಿ ಪ್ರದೆಶದ ಸ್ಥಳೀಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕುಡುಕರು ಕರ್ನಾಟಕಕ್ಕೆ ಬಂದು ಕೊರೋನಾ ಹರಡುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮೇ.24 ರಂದು ಒಂದೇ ದಿನ ಕೇರಳದಲ್ಲಿ 50 ಪ್ರಕರಣಗಳು ವರದಿಯಾಗಿವೆ. ಈ ನಡುವೆ ಕರ್ನಾಟಕಕ್ಕೆ ಬಂದು ಹೋಗುತ್ತಿರುವ ಕೇರಳದ ಮದ್ಯಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಇವರುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಮೈಸೂರು ಜಿಲ್ಲಾಡಳಿತ ಕೇರಳಿಗರನ್ನು ತಡೆಯಲು ಡಿಬಿ ಕುಪ್ಪೆ ಬೋಟ್ ಪಾಯಿಂಟ್ ಗಳನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ಗ್ರಾಮಸ್ಥರ ಮನವಿಯ ಮೇರೆಗೆ ಡಿಬಿ ಕುಪ್ಪೆ ಹಾಗೂ ಮಾಚೂರು ಬಳಿ ಇರುವ ಮದ್ಯದ ಅಂಗಡಿಗಳಿಗೆ ಕಂದಾಯ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. 

ಬೆಂಗಳೂರು: ಮುಂದಿನ ಮೂರು ದಿನ ಮಳೆ ಸಾಧ್ಯತೆ

0

ಬೆಂಗಳೂರು: ಮುಂದಿನ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ.

ಅರಬ್ಬೀ ಸಮುದ್ರ, ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ ಎಂದಿದ್ದಾರೆ.

ಕಳೆದೊಂದು ದಿನದಿಂದ ರಾಜಧಾನಿಯಲ್ಲಿ ಮಳೆ ಆಗುತ್ತಿದೆ. ಭಾನುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದ ಪರಿಣಾಮ ಹಲವೆಡೆ ಮರಗಳು ಧರೆಗುಳಿದಿದ್ದವು. ಲಾಕ್‌ಡೌನ್‌ ಕರ್ಪ್ಯೂ ಇದ್ದ ಪರಿಣಾಮ ಜನಸಂಚಾರ ವಾಹನ ಸಂಚಾರವಿಲ್ಲದೇ ಯಾವುದೇ ದುರ್ಘಟನೆ, ಅನಾಹುತ ಸಂಭವಿಸಿರಲಿಲ್ಲ.

ಆದರೆ ಬುಧವಾರದಿಂದ ಮಳೆ ಹೆಚ್ಚಾಗಿ ಅಬ್ಬರಿಸುವ ಸಾಧ್ಯತೆಯಿದೆ. ಮೂರು ದಿನ ಸಂಜೆ ಹೊತ್ತಿಗೆ ಮಳೆಸುರಿಯುವುದರಿಂದ ಕಚೇರಿಯಿಂದ ಹೊರಬರುವ ಸಮಯವಿದಾಗಿದ್ದು, ಮರ ಬೀಳುವ, ವಿದ್ಯುತ್ ಕಂಬ ಬೀಳುವ ಸಂಭವವಿದೆ. ಚರಂಡಿ, ರಸ್ತೆ ಗುಂಡಿಯಿಂದ ರಕ್ಷಿಸಿಕೊಳ್ಳುವಂತೆ ಮಳೆಯಲ್ಲಿ ಓಡಾಡದಂತೆ ಎಚ್ಚರಿಕೆಯಿಂದಿರಲು ಹೇಳಿದ್ದಾರೆ.

ಮುಂಗಾರಿಗೆ ರಸಗೊಬ್ಬರ ಕೊರತೆಯಾಗದು- ಸದಾನಂದ ಗೌಡ

0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತ ಸಮೂಹಕ್ಕೆ ರಸಗೊಬ್ಬರದ ಕೊರತೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲೂ ರಸಗೊಬ್ಬರ ಕಾರ್ಖಾನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ದೇಶದ ಯಾವುದೇ ಭಾಗದಲ್ಲೂ ರಸಗೊಬ್ಬರಕ್ಕೆ ಕೊರತೆಯಾಗುವುದಿಲ್ಲ ಎಂದಿದ್ದಾರೆ.

ನಗರದಲ್ಲಿಂದು ರಾಜ್ಯದ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸಗೊಬ್ಬರಕ್ಕೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯಕ್ಕೆ ಅಗತ್ಯವಾಗಿರುವ ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಎಸ್ಎಸ್ಎಲ್ ಸಿ ಪರೀಕ್ಷೆ ಬೇಡ: ಹಲವು ಜನಪರ ಸಂಘಟನೆಗಳ ,ಮುಖಂಡರು, ಶಿಕ್ಷಣ ಕ್ಷೇತ್ರದ ಪ್ರಮುಖರ ಒತ್ತಾಯ

0

ಬೆಂಗಳೂರು: ಕೋವಿಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಬಾರದು ಎಂದು ಹಲವು ಜನಪರ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಡಿ.ಎಸ್.ಎಸ್.ನ ಮಾವಳ್ಳಿ ಶಂಕರ್, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ನ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ ಮುಖಂಡ ಜಗನ್ನಾಥರಾವ್ .ಡಿ, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಂಘಟನೆ ಮುಖಂಡ ಪಿ.ವಿ. ನಿರಂಜನಾರಾಧ್ಯ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ ನ ಜಯಮ್ಮ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಶುಭಂಕರ್, ರಾಜ್ಯ ಮಹಿಳಾ ಒಕ್ಕೂಟದ ವಿದ್ಯಾ ಪಾಟೀಲ್, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಜ್ಯೋತಿ.ಕೆ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ನ ಮೊಹಮ್ಮದ್ ಪೀರ್ ಲಟಗೇರಿ, ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮೊಯ್ಯುದ್ದೀನ್ ಕುಟ್ಟಿ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಬಿ.ಪಾದ್ ಭಟ್, ಕರ್ನಾಟಕ ವಿದ್ಯಾರ್ಥಿ ಸಂಘದ ಸರೋವರ್, ಸಮ ಸಮಾಜಕ್ಕಾಗಿ ಗೆಳೆಯರ ಬಳಗದ ಗಂಗಾಧರ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕರಾದ ಗಾಯತ್ರಿ ದೇವಿ ದತ್, ಸಿದ್ಧರಾಮ ಮನೋಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ-ನಿರ್ದೇಶಕ ಸಿ.ವಿ.ತಿರುಮಲರಾವ್, ವಿಮುಕ್ತಿ ಸಂಘಟನೆಯ ಫಾದರ್ ಸತೀಸ್ ಸಹಿ ಸುದೀರ್ಘ ಪತ್ರದಲ್ಲಿ ಸಹಿ ಮಾಡಿದ್ದಾರೆ.

ಇಡೀ ಪ್ರಪಂಚವೇ ಈ ಕೋವಿಡ್ -19 ರ ಕರಾಳ ಹಸ್ತದಡಿ ನಲುಗಿ ಮುಂದೇನು ಎಂಬ ಭಯದಲ್ಲಿ ನಲುಗುತ್ತಿದ್ದು, ಇದರಲ್ಲಿ ಕರ್ನಾಟಕ ಕೂಡ ಹೊರತಾಗಿಲ್ಲ. ಈಗಿನ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ ಹಿಂದಿನ ಶೈಕ್ಷಣಿಕ ಪ್ರತಿಭೆ, ಕಾರ್ಯಕ್ಷಮತೆ ನೋಡಿ ತೇರ್ಗಡೆ ಮಾಡಬೇಕು. ಪರೀಕ್ಷೆ ಇಲ್ಲದೆಯೂ ಎಲ್ಲಾ ಮಕ್ಕಳಿಗೆ ಎಂದಿನಂತೆ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ದೊರೆಯಬೇಕು. ಕೋವಿಡ್ ನ ಈ ಸಂಕಷ್ಟ ಸಂದರ್ಭದಲ್ಲಿ ಇದೊಂದು ನಿರ್ಣಾಯಕ ತೀರ್ಮಾನವಾಗಲಿದ್ದು, ಲಕ್ಷ-ಲಕ್ಷ ಮಕ್ಕಳು ಪಾಲಕರು ಆತಂಕ, ಖಿನ್ನತೆ ಮತ್ತು ಭಯದಿಂದ ಹೊರಬಂದು ಸರ್ಕಾರದ ಈ ನಿರ್ಣಯಕ್ಕೆ ಚಿರಋಣಿಗಳಾಗಲಿದ್ದಾರೆ ಎಂದು ಹೇಳಿದ್ದಾರೆ.

ಸಂಕಷ್ಟ ಸಂದರ್ಭದಲ್ಲಿ ನಿಜವಾಗಿಯೂ ಪರೀಕ್ಷೆ ನಡೆಸುವುದು ಅನಿವಾರ್ಯವೇ? ಅತಿಮುಖ್ಯವೇ? ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ. ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆಗಳನ್ನು ರದ್ದುಮಾಡಿವೆ. ಈ ಬಾರಿ 8.5 ಲಕ್ಷ ವಿದ್ಯಾರ್ಥಿಗಳು, 2.2 ಲಕ್ಷ ನಿರ್ವಾಹಕ ಸಿಬ್ಬಂದಿ ಪರೀಕ್ಷಾ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರೆ. ಯಾರಿಗಾದರೂ ಸೋಂಕು ಉಂಟಾಗಿ ಅವರಿಗೆ ಏನಾದರು ಆದರೆ ಇದರ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದ್ದಾರೆ.

ಬಹುತೇಕ ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ. ಆದರೆ ರಾಮನಗರ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳು ಕಂಟೈನ್ ಮೆಂಟ್ ಜೋನ್ ನಲ್ಲಿವೆ. ಇನ್ನು ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ಮತ್ತೊಮ್ಮೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಪೋಷಕರು ಪರಸ್ಪರ ಭೇಟಿಯಾದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯ ನಂತರ ಕೇಂದ್ರೀಕೃತ ಮೌಲ್ಯಮಾಪನ ನಡೆಯಲಿದ್ದು, ಇದರಲ್ಲಿ ಭಾಗಿಯಾಗುವ ಶಿಕ್ಷಕರ ಮನೋಸ್ಥಿತಿ ಹಾಗೂ ಇದಕ್ಕೆ 15 ರಿಂದ 20 ಕೋಟಿ ರೂ ವೆಚ್ಚ ತಗಲಲದೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ 2.2 ಲಕ್ಷ ಜನತೆ ಮತ್ತೆ ಪರೀಕ್ಷೆ ಎದುರಿಸಬೇಕಾಗುತ್ತದೆ. ಪರೀಕ್ಷೆಗೆ ತಗಲುವ ಕೋಟಿ ಗಟ್ಟಲೆ ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಾದ ಮೂಲಸೌಕರ್ಯ, ಪೌಷ್ಠಿಕಾಂಶ , ಮಕ್ಕಳ ಆರೋಗ್ಯ ಅಥವಾ ರಾಜ್ಯ ಭರಿಸುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ಇತ್ಯಾದಿಗಳಿಗೆ ಬಳಬಹುದು ಎಂದು ಸಲಹೆ ಮಾಡಿದ್ದಾರೆ.

ವೇಗವಾಗಿ ಕೊರೊನಾ ಹರಡುತ್ತಿರುವುದರಿಂದ ಜೀವ ಹಾನಿ‌ಯಾಗುತ್ತಿವೆ. ಈ ಹಿಂದೆ ನಾನು ನಿಮ್ಮ ಜೊತೆ ಮಾತನಾಡಿದಾಗ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಆದರೀಗ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪರೀಕ್ಷೆ ನಡೆಸುವುದು ಸೂಕ್ತ ವಲ್ಲ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸದ್ಯ ಪರೀಕ್ಷೆ ನಡೆಸುವುದು ಸೂಕ್ತವಲ್ಲ.

-ಸಿದ್ದರಾಮಯ್ಯ , ಮಾಜಿ ಅಧ್ಯಕ್ಷ ‌ , ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕರ್ನಾಟಕ ತತ್ತರ: ಹೊಸದಾಗಿ 93 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆ!

0

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ರಣಕೇಕೆ ಮುಂದುವರೆದಿದ್ದು ಇಂದು ಸಹ ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ.

ಉಡುಪಿ 32, ಕಲಬುರಗಿ 16, ಯಾದಗಿರಿ 15,  ಬೆಂಗಳೂರು 8, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಮಂಡ್ಯ 2, ಕೋಲಾರ 2, ಹಾಸನ, ತುಮಕೂರು, ಬೆಳಗಾವಿ, ವಿಜಯಪುರ, ಉತ್ತರಕನ್ನಡ, ರಾಮನಗರದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

ರಾಜ್ಯದಲ್ಲಿ ಇಂದು ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ನಿವಾಸಿ ಭಾನುವಾರ ರಾತ್ರಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 43 ವರ್ಷದ ನಿವಾಸಿ ಮೇ 23ರಂದು ಮೃತಪಟ್ಟಿದ್ದರು. ಅವರಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ಸೋಮವಾರ ಬಿಡುಗಡೆಯಾದ ವರದಿಯಲ್ಲಿ ದೃಢಪಟ್ಟಿತ್ತು.

2,182 ಪ್ರಕರಣಗಳ ಪೈಕಿ 1,431 ಪ್ರಕರಣಗಳು ಸಕ್ರಿಯವಾಗಿದ್ದು 705 ಮಂದಿ ಗುಣಮುಖರಾಗಿದ್ದಾರೆ.

ಮೂವರು ಅಂತಾರಾಷ್ಟ್ರೀಯ(ದುಬೈ) ಮತ್ತು 73 ಅಂತಾರಾಜ್ಯ ಪ್ರಯಾಣಿಕರಾಗಿದ್ದಾರೆ. ಭಾನುವಾರದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 17830 ಜನರನ್ನು ತಪಾಸಣೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಮಾಜಮುಖಿ ಕಾರ್ಯ ವಿಸ್ತಾರಗೊಂಡಾಗ ತೃಪ್ತಿ – ಸಂದೀಪ್ ಪಾಂಡೆ

0
  • ಐಎಎಸ್ – 3 ವಿದ್ಯಾರ್ಥಿಗಳು
  • ಕಾಲೇಜು – 7 ವಿದ್ಯಾರ್ಥಿಗಳು

`ಉಳ್ಳವರು ಶಿವಾಲಯವ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ…’ ಈ ತತ್ವ ಪದವನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಈ ಸಾಲಿನಲ್ಲಿ ಬಡವನೊಬ್ಬನು ತನ್ನಲ್ಲಿ ಏನೂ ಇಲ್ಲದ್ದರಿಂದ ಶಿವಾಲಯವನ್ನು ಕಟ್ಟಲು ಆಗುವುದಿಲ್ಲ, ಅವರೇನೋ ಉಳ್ಳವರು ಏನು ಬೇಕಾದರೂ ಮಾಡುತ್ತಾರೆ ಎಂದು ತನ್ನ ಅಸಹಾಯಕ ಸ್ಥಿತಿಯನ್ನು ಹೇಳಿಕೊಳ್ಳುತ್ತಿರುವುದನ್ನು ಕಾಣುತ್ತೇವೆ.ಹಾಗೆ ನೋಡಿದರೆ ಉಳ್ಳವರು ಎಂದರೆ ಎಲ್ಲವನ್ನು ಹೊಂದಿರುವವರು, ಶ್ರೀಮಂತರು ಎಂದು ಅರ್ಥೈಸಿ ಕೊಳ್ಳಬಹುದು. ಹೌದು ಉಳ್ಳವರಲ್ಲಿ ಬಹುತೇಕರು ಯಾವುದೋ ಒಂದು ಕಾರಣಕ್ಕೆ ಭೌತಿಕವಾಗಿ ದೇವಾಲಯಗಳಿಗೆ ಸಾಕಷ್ಟು ದಾನ ಮಾಡಿದ್ದಾರೆ. ಇಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಇಲ್ಲೆಬ್ಬರಿದ್ದಾರೆ, ಯಾರ ಕಣ್ಣಿಗೂ ಬೀಳದೆ ಎಲೆಮರೆ ಕಾಯಿಯಂತೆ ಒಂದು ನಿರ್ಧಿಷ್ಠವಾದ ಗುರಿಯನ್ನು ಇಟ್ಟುಕೊಂಡು ಸಮಾಜಮುಖಿ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ದೇವಾಲಯಗಳನ್ನು ಕಟ್ಟುವುದಕ್ಕಿಂತ ದೇವರ ಸೃಷ್ಠಿಯಾದ ಜೊತೆ ಮಾನವರೆಂಬ ದೇಗುಲಗಳಿಗೆ ಸಹಕಾರಿಯಾಗಿರುವುದು ಕಂಡು ಬಂತು.
ಈ ಸಹಕಾರ, ಅಗತ್ಯವಿರುವವರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಕೊರೋನಾ ಬಂದಾಗ ಬಂದಿರುವುದಲ್ಲ. ಅನೇಕ ವರ್ಷಗಳಿಂದ ಅಸಹಕಾರಿಗಳಿಗೆ ಅಗತ್ಯಗಳನ್ನು ಒದಗಿಸಿಕೊಡುತ್ತಾ ಬಂದಿದ್ದಾರೆ. ಸಧ್ಯಕ್ಕೆ ಅವರ ಸಮಾಜಮುಖಿ ಕೆಲಗಳು ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗಿದೆ.

ಸಂದೀಪ್ ಪಾಂಡೆ

ಭವಿಷ್ಯ ಸಮಾಜಕ್ಕೆ ಬುನಾಧಿ:
ನಮ್ಮ ನಾಳಿನ ಸಮಾಜಕ್ಕೆ ಭದ್ರ ಬುನಾದಿ ಹಾಕುವ ಕೆಲಸ. ಅಷ್ಟೇ ಪ್ರಾಮುಖ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ಯಾರಿಗೆ ಏನೇನು ಅಗತ್ಯವಿದೆ ಎನ್ನುವುದು ಅವರ ಗಮನಕ್ಕೆ ಬಂದರೆ ಕೂಡಲೇ ಸ್ಪಂದಿಸುವ ವಿಶಾಲ ಹೃದಯವಂತಿಕೆ ಅವರಿಗಿದೆ. ತಾನು ಏನೇ ಸಮಾಜಮುಖಿ ಕೆಲಸ ಮಾಡಿದರೂ ಅದು ನನ್ನ ಆತ್ಮ ತೃಪ್ತಿಗೆ ಹೊರತು ಅದಕ್ಕೆ ಪ್ರಚಾರ ಬೇಕಿಲ್ಲ ಎಂಬ ಸಿದ್ಧಾಂತಕ್ಕೆ ಕಟ್ಟು ಬಿದ್ದವರು. ಒಬ್ಬರಿಂದ ಮತ್ತೊಬ್ಬರಿಗೆ ವಿಚಾರಗಳು ತಲುಪುತ್ತಿದೆ. ಅಗತ್ಯವಿದ್ದವರು ಸಂಪರ್ಕಿಸುತ್ತಾರೆ, ಅವರ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು, ಆರ್ಥಿಕ ಸಹಾಯ ಮುಂತಾದವನ್ನು ನೀಡುತ್ತಲೇ ಬಂದಿದ್ದಾರೆ.
ಕೊರೋನಾ ಹೆಚ್ಚಾದಂತೆ ಊರಿಗೆ ಊರೇ ಬಂದ್ ಆಗಿ ಎಲ್ಲ ಲಾಕ್‍ಡೌನ್ ಆದಾಗ ಅದೆಲ್ಲೆಲ್ಲಿಇದ್ದ ಹಾಲಿ, ಮಾಜಿ, ಭಾವಿ ನಾಯಕರು, ರಾಜಕೀಯ ಮುಖಂಡರು, ಸಂಘಟಿಕರು ಮುಂತಾದವರೆಲ್ಲ ಮಾಸ್ಕ್, ಸ್ಯಾನಿಟೈಜರ್, ಪಡಿತರ ಕಿಟ್‍ಗಳು, ಊಟದ ಪ್ಯಾಕೆಟ್‍ಗಳು, ಔಷಧಿ ಮುಂತಾದವುಗಳನ್ನು ಕೊಡುವ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ಕೆಲವರು ಎಷ್ಟು ಪಡಿತರ ಕಿಟ್‍ಗಳನ್ನು ನೀಡಿದ್ದೇವೆ, ಎಷ್ಟು ದಿನಗಳಿಂದ ಊಟದ ಪ್ಯಾಕೆಟ್ ವಿತರಿಸುತ್ತಿದ್ದೆವೆ ಎಂಬುದರ ಮೇಲೆ ಪ್ರಚಾರ ಪಡೆಯುತ್ತಲೇ ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಆ ವ್ಯಕ್ತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕೂಡ ಓದುಗರಾದ ನಿಮಗೆ ಹೆಚ್ಚಾಗದೇ ಇರಲಾರದು.

ದಯವಿಟ್ಟು ಪ್ರಚಾರ ಬೇಡ, ಯಾರಿಗಾದರು ಏನಾದರೂ ಬೇಕಿದ್ದರೆ ಹೇಳಿ:
ಕ್ಷಮಿಸಿ ಸಂದೀಪ್ ಪಾಂಡೆ ಸರ್, ನಿಮ್ಮ ಹೆಸರು ಮಾತ್ರವಲ್ಲ, ನಿಮ್ಮ ಬಗ್ಗೆ ನಮ್ಮ ಓದುಗರಿಗೆ ತಿಳಿಸುವ ಅಗತ್ಯವಿದೆ. ಸಂದೀಪ್ ಅವರು ಮೂಲತಃ ಬೆಂಗಳೂರಿನವರು. ಕಳೆದ ಎಂಟು ವರ್ಷಗಳಿಂದ ಮೈಸೂರು ನಗರದ ವಿಜಯ ನಗರ 2ನೇ ಹಂತದಲ್ಲಿ ನೆಲೆಸಿದ್ದಾರೆ. ಲಾಕ್‍ಡೌನ್ ಆದ ಸಂದರ್ಭದಲ್ಲಿ ತಮ್ಮ ಆತ್ಮೀಯ ಪೊಲೀಸ್ ಅಧಿಕಾರಿಯೊಟ್ಟಿಗೆ ಸೇರಿ ನಗರದ ಎಲ್ಲಾ ರಸ್ತೆಯಲ್ಲಿ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಜರ್, ಒಂದು ಬಾಟಲ್ ನೀರು, ಒಂದು ಪ್ಯಾಕೆಟ್ ಬಿಸ್ಕೆಟ್, ಹಂಚುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ ನನಗೆ ಅವರ ಪರಿಚಯವಾಯ್ತು.
ಕುತೂಹಲದಿಂದ ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದಾಗ ಬೆಳಕಿಗೆ ಬಂದಿದ್ದು, ಸಂದೀಪ್ ಪಾಂಡೆ ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗ, ಅನೇಕ ವರ್ಷಗಳಿಂದ ಅಗತ್ಯ ಇರುವವರಿಗೆ ಸಹಾಯ ಮಾಡುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ. ತಮಗೆ ಪರಿಚಯ ಇರುವವರು, ಇಲ್ಲದವರು ಯಾರೇ ಆಗಲಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ರತ್ನ, ತಾಯವ್ವ, ಮಂಗಳ, ಮಾದೇವಿ ವಿಜಯ

ಶಾಲೆಯಿಂದ ಐಎಎಸ್ ಓದುವವರಿಗೂ ಸಹಾಯ:

ಸಂದೀಫ್ ಅವರು ತಾವು ವಾಸವಾಗಿರುವ ಪ್ರದೇಶದಲ್ಲಿರು ಅನೇಕ ಬಡಜನರಿಗೆ ಭಗವಂತನಂತೆ ಕಾನಿಸಿಕೊಂಡಿದ್ದಾರೆ. ಕಾರಣ ಇಷ್ಟೇ ಅಗತ್ಯತೆ ಏನಿದೆ ಅದನ್ನು ಪೂರೈಸಿಕೊಟ್ಟಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಿಕೊಟ್ಟಿದ್ದಾರೆ, ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ, ಕಾಲೇಜು ಹಾಗೂ ಐಎಎಸ್ ವ್ಯಾಸಂಗಕ್ಕೂ ಫೀ ಭರಿಸಿದ್ದಾರೆ. ದೇಹಿ ಎಂದು ಹೋದವರಿಗೆ ಇಲ್ಲಾ ಎನ್ನದೆ ಸಹಾಯ ಮಾಡಿದ್ದಾರೆ. ಕ್ವಾರಂಟೈನ್ ಸಮಯದಲ್ಲಿ ಕೊಟ್ಟ ಆಹಾರದ ಕಿಟ್‍ನಲ್ಲಿ ಇದ್ದ ಎಲ್ಲಾ ಪದಾರ್ಥಗಳೂ `ದಿ ಬೆಸ್ಟ್’ ಎನ್ನುವಂತಾದ್ದು. ಇಷ್ಟೆಲ್ಲಾ ಮಾಢುತ್ತಿರುವ ಇವರಿಗೆ ಯಾವುದೇ ರಾಜಕೀಯ ಪಕ್ಷದ ಟಿಕೆಟ್, ಎಂಎಲ್‍ಸಿ ಯಾವ ಪದವಿಯೂ ಬೇಕಾಗಿಲ್ಲ, ನಾಲ್ಕು ಮಂದಿಗೆ ಸಹಾಯ ಮಾಢಿ ದೊಡ್ಡ ಬೋರೇಗೌಡ ಎನಿಸಿಕೊಳ್ಳುವ ಅಗತ್ಯವೂ ಇಲ್ಲ. ಆದರೆ ಇದರ ಹಿಂದೆ ಒಂದು `ಸೇಡು’ ಇದೆ.

ಉಮೇಶ್, ನಿಂಗಣ್ಣ

ಅನುರಾಗದ ಬದುಕಿನೊಂದಿಗೆ ಹುಟ್ಟಿ ಸೇಡು:
ಅದು ಸಂದೀಪ್ ಅವರ ಯೌವನ ಕಾಲದ ಕಥೆ. ಬೆಂಗಳೂರಿನಲ್ಲಿ ಕಾಲೇಜು ಓದುವಾಗ ಎಲ್ಲರಿಗೂ ಆಗುವಂತೆ ಪ್ರೀತಿ, ಪ್ರೇಮ, ಅನುರಾಗದ ಆಗಿತ್ತು. ತಂದೆ, ತಾಯಿಯ ಮನವೊಲಿಸಲು ಆಗದೆ ಪ್ರೀತಿಸಿ ಹುಡುಗಿಯೊಂದಿಗೆ ಮುಂಬೈಗೆ ಹೋಗಿ ಹೊಸ ಬದುಕು ಆರಂಭಿಸಿಕೊಂಡರು. ನಿತ್ಯದ ಭವಣೆ ನೀಗಿಸಲು ದೊಡ್ಡ ನಗರದಲ್ಲಿ ಇಬ್ಬರೂ ದುಡಿಯಲೇ ಬೇಕಾಗಿತ್ತು. ತಾವು ಸಂಪಾದಿಸುವ ಹಣದಲ್ಲಿ ಉತ್ತಮವಾದ, ಬೆಲೆ ಬಾಳುವ ವಸ್ತುಗಳನ್ನು ಖರೀದಿಸಲು ಆಗದೆ, ತಮ್ಮಿಬ್ಬರ ಆಶೆಗಳನ್ನೆಲ್ಲಾ ಬದಿಗೆ ಹೊತ್ತಿ ಅನಿವಾರ್ಯವಾಗಿ ಕಷ್ಟವೋ, ಸುಖವೋ ಇದ್ದದ್ದರಲ್ಲೇ ದಿನಗಳನ್ನು ನೂಕ ಬೇಕಾಗಿತ್ತು.
ಕ್ರಮೇಣ ಕಷ್ಟದ ದಿನಗಳು ಬದಲಾದವು. ಆಗ ಅತ್ಯಂತ ಬೆಲೆ ಬಾಳುವ ವಸ್ತು ಎನಿಸಿಕೊಂಡದ್ದನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ `ದಿ ಬೆಸ್ಟ್’ ಎನಿಸಿಕೊಂಡಿರುವ ವಸ್ತು ನಮ್ಮ ಭಾಗದ ಬಡ ಮನುಷ್ಯನೂ ಬಳಸುವಂತಾಗ ಬೇಕೆಂದು ಯಾರಿಗೆ ಏನೇ ಕೊಟ್ಟರೂ ಉತ್ತಮವಾದದ್ದು, ಬೆಲೆಬಾಳುವಂಥದ್ದನ್ನೇ ನೀಡುತ್ತಿದ್ದಾರೆ. ಇಷ್ಟಲ್ಲಾ ಮಾಡುತ್ತಿರುವ ಸಂದೀಪ್ ಅವರಿಗೆ ಒಂದು ಎನ್‍ಜಿಓ ಆರಂಭಿಸಿ ಸಂಕಷ್ಟದಲ್ಲಿರುವವರ ಕೈ ಹಿಡಿಯ ಬೇಕೆಂಬ ಆಶೆ ಇದೆ. ಸಮಾಜಮುಖಿ ಕೆಲಗಳು ವಿಸ್ತಾರಗೊಂಡಾಗ ಮಾತ್ರ ತೃಪ್ತಿ ಎನ್ನುತ್ತಾರೆ

ಅವರು ಕೊಡುಗೈ ದಾನಿ :
ಇವರಿಂದ ಅನೇಕ ಅನುಕೂಲತೆಗಳನ್ನು, ಸಹಾಯಗಳನ್ನು ಹೊಂದುತ್ತಿರುವವರೆಲ್ಲರೂ ಒಂದು ಕಡೆ ಸಿಕ್ಕಿದ್ದರು. ಬಲದೊಂದ ಎಡಕ್ಕೆ ಇರುವವರು ಉಮೇರ್ಶ, ಮಾದೇವಿ, ಮಂಗಳ, ತಾಯಮ್ಮ, ರತ್ನ, ವಿಜಯ. ಸೆಕ್ಯೂರಿಟಿಯಲ್ಲಿರುವ ನಿಂಗಣ್ಣ, ಮರಿನಾಯಕ ಇವರುಗಳೇ.
ಲಾಕ್‍ಡೌನೌ ಸಂದರ್ಭದಲ್ಲಿ ಇವರೆಲ್ಲರಿಗೂ ಆಹಾರದ ಕಿಟ್, ಮಾಸ್ಕ, ಸ್ಯಾನಿಟೈಜರ್ ಅಲ್ಲದೆ ನಿತ್ಯವೂ ಇವರಿಗೆ ಕಾಫಿ, ತಿಂಡಿ, ಊಟದ ವ್ಯವಸ್ಥೆ ಕಲಿಪಸಿದ್ದಾರೆ. ವಿಜಯ ಎಂಬವರ ಮಗಳ ಕಾಲೇಜು ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ.
ಅವರು ತಮ್ಮ ಮನೆಯಲ್ಲಿ ಏನು ಊಟ ಮಾಡುತ್ತಾರೋ ಅದನ್ನೇ ನಮಗೂ ಕೊಡುತ್ತಾರೆ. ಬಡವರು, ಕೆಲಸದವರು ಎನ್ನುವ ಬೇಧ ಭಾವ ಮಾಡುವುದಿಲ್ಲ. ಎಲ್ಲರನ್ನೂ ಒಂದೇ ಭಾವನೆಯಿಂದ ಗೌರವದಿಂದ ಕಾಣುತ್ತಾರೆ. ನಮಗೆ ಅಗತ್ಯ ಇರುವುದನ್ನೆಲ್ಲಾ ನೀಡುವ ಕೊಡುಗೈ ದಾನಿ ಎಂದು ಇವರೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಅದೇನೇ ಇರಲಿ ಯಾರಿಗಾದರೂ ಕಷ್ಟ ನಮಗೆ ಸಹಾಯ ಬೇಕು ಎಂದು ಬಯಸುವವರು ಅವರ ಇ-ಮೇಲ್‍ಗೆ ಪತ್ರ ಬರೆದು ತಿಳಿಸಿ. ವಿಳಾಸ: kppandeyblore@gmail.com

ಸಾಲೋಮನ್

ರಾಜ್ಯದಲ್ಲಿ ಇಂದು 130 ಹೊಸ ಕೋವಿಡ್ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆ

0

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 130 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2089ಕ್ಕೇರಿಕೆಯಾಗಿದೆ.

ಮಂಡ್ಯದಲ್ಲಿ 15, ಕಲಬುರಗಿಯಲ್ಲಿ 6, ಚಿಕ್ಕಬಳ್ಳಾಪುರದಲ್ಲಿ 27, ದಾವಣಗೆರೆಯಲ್ಲಿ 4, ಯಾದಗಿರಿಯಲ್ಲಿ 24, ಹಾಸನದಲ್ಲಿ 14, ಬೀದರ್ ನಲ್ಲಿ 6, ಉಡುಪಿಯಲ್ಲಿ 23, ವಿಜಯಪುರದಲ್ಲಿ 1, ಉತ್ತರ ಕನ್ನಡದಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಧಾರವಾಡದಲ್ಲಿ 1, ಶಿವಮೊಗ್ಗದಲ್ಲಿ 2, ತುಮಕೂರಿನಲ್ಲಿ 2, ಕೊಡಗಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಕೇವಲ ಒಂದು ಪ್ರಕರಣ ಪತ್ತೆಯಾಗಿದೆ.

ಇವರಲ್ಲಿ 105 ಜನರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಶಿವಮೊಗ್ಗದ ಓರ್ವರು ರಾಜಸ್ತಾನದಿಂದ ಹಿಂದಿರುಗಿರುವ ಇತಿಹಾಸ ಹೊಂದಿರುವುದನ್ನು ಹೊರತುಪಡಿಸಿದರೆ ಇತರರೆಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ.

ಭರವಸೆ ಮೂಡಿಸುವ ಯುವ ನಿರ್ದೇಶಕ ಕಿರುಚಿತ್ರ `ಕರಾಳ ರೋಗ ನಾಶ’

0

ಪಿಆರ್‍ಓ ವೆಂಕಟೇಶ್ ಪುತ್ರ ಪವನ್ ವೆಂಕಟೇಶ್ ಪ್ರಥಮ ಯತ್ನ

ಕನ್ನಡ ಸಿನಿಮಾರಂಗದ ಖ್ಯಾತ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್ ಅವರ ಮಗ ಪವನ್‌ ವೆಂಕಟೇಶ್ ಕಿರುಚಿತ್ರವೊಂದರ ಮೂಲಕ ಕನ್ನಡದ ಮನರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾನೆ.  ‘ಕರೋನಾ – ಕರಾಳ ರೋಗ ನಾಶʼ ಎಂಬ ಕಿರುಚಿತ್ರವೊಂದರ ಮೂಲಕ ಕೋವಿಡ್-19ನ ವಿವಿಧ ಮಜಲುಗಳನ್ನು ಒಂದೊಳ್ಳೆ ಸಂದೇಶದ ಜೊತೆ ಅನಾವರಣಗೊಳಿಸಲಾಗಿದೆ. ಪವನ್ ಕಾಲೇಜು ವಿದ್ಯಾರ್ಥಿ. ಆತ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬಾಲ್ಯದಿಂದಲೂ ಸಿನಿಮಾ ವಾತಾವರಣದಲ್ಲಿಯೇ ಬೆಳೆದು, ನಿರ್ದೇಶಕನಾಗಬೇಕೆಂಬ ಆಸಕ್ತಿ ಹೊಂದಿದ್ದ ಪವನ್ ʻಕರಾಳ ರೋಗ ನಾಶʼ ಕಿರುಚಿತ್ರದ ಮೂಲಕ ತನ್ನ ಕನಸಿನ ಹಾದಿಯಲ್ಲೊಂದು ಹೆಜ್ಜೆ ಇಟ್ಟಿದ್ದಾನೆ. ಈ ಹಿಂದೆ ಸಿನಿಮಾ ಪ್ರಚಾರಕರ್ತ ಡಿವಿ. ಸುಧೀಂದ್ರ ಅವರ ಬದುಕಿನ ಹಾದಿಯನ್ನು ತೆರೆದಿಡುವ ’ಸುಧೀಂದ್ರ ಸಿನಿ ಪಯಣ’ ಎನ್ನುವ ಸಾಕ್ಷ್ಯ ಚಿತ್ರವನ್ನು ಪವನ್ ವೆಂಕಟೇಶ್ ನಿರ್ದೇಶಿಸಿದ್ದರು. 

ಸುಧೀಂದ್ರ ಅವರ ಕಾಲಾನಂತರ ಅವರ ಅಣ್ಣನ ಮಗ ವೆಂಕಟೇಶ್ ಶ್ರೀ ರಾಘವೇಂದ್ರ ಚಿತ್ರವಾಣಿಯ ಮುಖ್ಯಸ್ಥಿಕೆ ವಹಿಸಿದ್ದಾರೆ. ಜೊತೆಗೆ ಸುಧೀಂದ್ರ ಅವರ ಮಗ ಸುನಿಲ್ ಮತ್ತು ವೆಂಕಟೇಶ್ ಅವರ ಸಹೋದ ಡಿ.ಜಿ. ವಾಸುದೇವ್ ಸಹಾ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಇವೆಲ್ಲದರ ಪ್ರತಿಫಲವಾಗಿ ಇಂದು ಶ್ರೀರಾಘವೇಂದ್ರ ಚಿತ್ರವಾಣಿ ಮತ್ತು ಸುಧೀಂದ್ರ ವೆಂಕಟೇಶ್ ಸಹೋದರರು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ.ಈಗ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂರನೇ ತಲೆಮಾರಿನ ಹುಡುಗರೆಲ್ಲ ಸೇರಿ ಈ ಕಿರುಚಿತ್ರವನ್ನು ರೂಪಿಸಿದ್ದಾರೆ. 

4 ನಿಮಿಷ 15 ಸೆಕೆಂಡ್ ಸಮಯದ ಈ ಶಾರ್ಟ್‌ ಫಿಲ್ಮ್‌ ಒಂದೇ ಕೋಣೆಯಲ್ಲಿ ಚಿತ್ರಿತವಾಗಿದೆ. ಕೊರೋನಾ ತಡೆಯುವುದು ಹೇಗೆ ಅನ್ನೋದರ ವಿವರ ಇದರಲ್ಲಿದ್ದು, ತಾತ ಮತ್ತು ಮೊಮ್ಮೊಗನ ಪಾತ್ರಗಳ ಮೂಲಕ ಅದು ಅನಾವರಣಗೊಂಡಿದೆ. ಈ ಕಿರುಚಿತ್ರವನ್ನು ನೋಡಿದರೆ ಕೊರೋನಾ ಹರಡಲು ಕಾರಣ ಮತ್ತು ಅದನ್ನು ನಿಯಂತ್ರಿಸುವ ವಿಧಾನ ಎರಡೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ತರುಣ ಜಯಸಿಂಹ ತಾತನ ಪಾತ್ರಲ್ಲಿ ಕಾಣಿಸಿಕೊಂಡರೆ ಸುನಿಲ್‌ ಪುತ್ರ ಮಾ. ಡಿ.ಎಸ್.‌ ಸುಧೀಂದ್ರ ಮೊಮ್ಮಗನಾಗಿ ಪಾತ್ರ ನಿರ್ವಹಿಸಿದ್ದಾನೆ.

ಸುಧೀಂದ್ರ ವೆಂಕಟೇಶ್‌ ಅವರ ಪುತ್ರಿ ಚಂದನ ಅಂದವಾದ ಪ್ರಸಾದನ ಮಾಡಿದ್ದಾರೆ. ವೆಂಕಟೇಶ್‌ ಪುತ್ರ ಪವನ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ಅರುಣ್ ಡಿ ಎಂ ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿದ್ದಾರೆ. ಮನೋಜ್ ಎಚ್ಎನ್ ಮತ್ತು ಮಲ್ಲೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಮಾವೊಂದನ್ನು ಕಟ್ಟಿನಿಲ್ಲಿಸಲು ಬೇಕಾದ ಶ್ರದ್ಧೆ, ಪೂರ್ವತಯ್ಯಾರಿಗಳೆಲ್ಲಾ ಈ ಕಿರುಚಿತ್ರದಲ್ಲೇ ಎದ್ದುಕಂಡಿದೆ. ಸಣ್ಣ ವಯಸ್ಸಿನ ಯುವಕರೆಲ್ಲಾ ಸೇರಿ ರೂಪಿಸಿರುವ ಪುಟಾಣಿ ಪ್ರಯತ್ನವಾದರೂ, ಮುಂದೊಂದು ದಿನ ಈ ಪ್ರತಿಭಾವಂತರು ದೊಡ್ಡ ಸಾಹಸ ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದೆ.

MOST COMMENTED

ಸಾವಿರಾರು ದೇವಸ್ಥಾನ ವಾಪಸ್ ಪಡಿತಿವಿ. ತಡೆಯೋ ತಾಕತ್ತು ಇದೆಯಾ ನಿಮಗೆ..!?

0
* ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್   ಮಜೀದ್ ಗೆ ಮೈಸೂರಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ಮೈಸೂ,ಮೇ.    - ಮಳಲಿ ಮಸೀದಿ ವಿಚಾರವಾಗಿ ಸಾಕಷ್ಟು ವಿವಾದಗಳನ್ನ ಸೃಷ್ಟಿಮಾಡ್ತಿದೆ. ಮಸೀದಿಯ ಒಂದು ಹಿಡಿ ಮಣ್ಣನ್ನು...

HOT NEWS