ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: ಸರ್ಕಾರಕ್ಕೆ ಎಂಎಲ್ ಸಿ ದಿನೇಶ್‌ ಗೂಳಿಗೌಡ ಒತ್ತಾಯ.

0
5

ಮೈಸೂರು,ಡಿ. 5 – ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅರ್ಜುನನ ಸೇವೆಯನ್ನು ಪರಿಗಣಿಸಿ ಪ್ರತಿ ವರ್ಷ ಮೈಸೂರು ದಸರೆಯಲ್ಲಿ ಮಾವುತರಿಗೆ “ಅರ್ಜುನ”ನ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅರ್ಜುನ ಆನೆಗೂ ಮೈಸೂರಿಗೂ ಅವಿನಾಭಾವ ಸಂಬಂಧ ಇದೆ. ಅಲ್ಲದೆ, ದಸರಾ ಜಂಬೂ ಸವಾರಿ ವೇಳೆ ಅರ್ಜುನನ ಕೊಡುಗೆ ಸಾಕಷ್ಟು ಇದೆ. ಆತ 8 ಬಾರಿ ನಾಡಿನ ಅಧಿ ದೇವತೆ, ತಾಯಿ ಚಾಮುಂಡೇಶ್ವರಿ ದೇವಿಯ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ರಾಜಗಾಂಭೀರ್ಯದಿಂದ ಕಾರ್ಯನಿರ್ವಹಿಸಿದ್ದಾನೆ ಎಂದು ಅರ್ಜುನನ ಕಾರ್ಯವೈಖರಿ ಬಗ್ಗೆ ಶಾಸಕ ದಿನೇಶ್‌ ಗೂಳಿಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಸರಾ ಮಾತ್ರವಲ್ಲದೆ ನೂರಾರು ಕಾಡಾನೆ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದಾನೆ. ಆಗ ಸಾಕಷ್ಟು ಸಂದರ್ಭದಲ್ಲಿ ಇತರ ಆನೆಗಳು, ಆನೆಯ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ಪ್ರಾಣವನ್ನು ಅರ್ಜುನ ಕಾಪಾಡಿದ್ದಾನೆ ಎಂದು ಶಾಸಕ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

ಕಳೆದ 23 ವರ್ಷಗಳಿಂದ ಅರ್ಜುನನಿಗೂ ಹಾಗೂ ಮೈಸೂರು ದಸರೆಗೂ ಅವಿನಾಭಾವ ನಂಟು ಇತ್ತು. ಹೀಗಾಗಿ ಅರ್ಜುನನ ಹೆಸರು ಮೈಸೂರಿನ ದಸರೆಯ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಅರ್ಜುನನ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿಯನ್ನು ನೀಡಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here