ಅಲ್ಪಸಂಖ್ಯಾತರ ಕಲ್ಯಾಣಕ್ಕೆ 5 ಸಾವಿರ ಕೋಟಿ ಮೀಸಲಿಟ್ಟರೆ ತಪ್ಪೇನಿದೆ?: ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

0
14

ಬೆಳಗಾವಿ, ಡಿ. 5 – ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ 4 ಸಾವಿರದಿಂದ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ.

ಮಂಗಳವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹುಬ್ಬಳ್ಳಿಯ ಸಮಾವೇಶದಲ್ಲಿ ತಾವು ನೀಡಿಯಲ್ಲಿ ಹೇಳಿಕೆಯಲ್ಲಿ ಏನು ತಪ್ಪಿದೆ?‌ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ ಎಂದಿದ್ದೆ ಅದನ್ನು ಬಿಟ್ಟು ಬೆರೆ ಬರೆದರೆ ನಾನು ಏನು ಮಾಡುವುದು? ಎಂದರು.

ನನ್ನ ಹೇಳಿಕೆಗೆ ಉಪ್ಪು ಖಾರ ಹಾಕಿ ಹೇಳುತ್ತಿದ್ದಾರೆ. ಮುಸ್ಲಿಮರು ಸೇರಿ ಎಲ್ಲರಿಗೂ ರಕ್ಷಣೆ ಕೊಡುತ್ತೇನೆ ಎಂದು ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸಂಜೆ ನಡೆದ ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು,  4ರಿಂದ 5 ಸಾವಿರ ಕೋಟಿ ರೂ.ಗಳನ್ನು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಡುವುದಾಗಿ ಘೋಷಿಸಿದ್ದರು. ಅಲ್ಲದೆ ಮುಂದೆ ಅದನ್ನು 10 ಸಾವಿರ ಕೋಟಿಗೆ ಹೆಚ್ಚಿಸಬೇಕು ಅನ್ನೋದು ನಮ್ಮ ಉದ್ದೇಶ. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ನಿಮಗೆ ಅನ್ಯಾಯವಾಗೋಕೆ ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳಿದ್ದರು.

ಇಂದು ತಮ್ಮ “ಹೇಳಿಕೆಯಲ್ಲಿ ತಪ್ಪೇನಿದೆ?” ಎಂದು ಅಚ್ಚರಿ ವ್ಯಕ್ತಪಡಿಸಿದ ಸಿಎಂ, ತಮ್ಮ ಹೇಳಿಕೆಯ ಒಂದು ಭಾಗವನ್ನು ಮಾತ್ರ ಸಮರ್ಥವಾಗಿ ಹೈಲೈಟ್ ಮಾಡಿ, ಇನ್ನೊಂದು ಭಾಗವನ್ನು ನಿರ್ಲಕ್ಷಿಸಿರುವ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರಿಗೆ ಅನ್ಯಾಯವಾಗಲು ಬಿಡಲ್ಲ ಎಂಬ ಸಿಎಂ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಬಿಜೆಪಿ ನಾಯಕರು, ಮುಸ್ಲಿಮರಿಗೆ ಏನು ಅನ್ಯಾಯ ಆಗಿದೆ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರು ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್, ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here