ಕೊಡವರಿಗೆ ಪ್ರತ್ಯೇಕ ಅಸ್ಥಿತ್ವಕ್ಕೆ ನಾನು ಹೋರಾಡುತ್ತೇನೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

0
24
ಮಡಿಕೇರಿ, ನ. 26 – “ಕರ್ನಾಟಕ ರಾಜ್ಯದಲ್ಲಿ ನಿಮ್ಮ(ಕೊಡಗು) ಪ್ರತ್ಯೇಕ ಅಸ್ತಿತ್ವಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ಜೂನ್ ಅಥವಾ ಜುಲೈ ಅಂತ್ಯದೊಳಗೆ ಕೊಡವ ಲ್ಯಾಂಡ್ ಬೇಡಿಕೆಗೆ ನ್ಯಾಯಾಲಯದಿಂದ ಸ್ಪಂದನೆ ದೊರಕುವಂತೆ ಮಾಡುವುದಾಗಿ” ಮಾಜಿ ಸಚಿವ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಶನಿವಾರ ಕೊಡಗಿನಲ್ಲಿ ಘೋಷಿಸಿದ್ದಾರೆ.
ಇಂದು ಮಡಿಕೇರಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‌ಸಿ) ಆಯೋಜಿಸಿದ್ದ 32ನೇ ಕೊಡವ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ಕೊಡವರಿಗೆ ಸ್ವಾಯತ್ತ ನಾಡು ಕೇಳಲು ಸಂವಿಧಾನಾತ್ಮಕವಾಗಿ ಎಲ್ಲಾ ಹಕ್ಕು ಇದೆ. ಸಿಎನ್‌ಸಿಗೆ ಕಾನೂನು ಹೋರಾಟದ ಮೂಲಕ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಗುರಿ ಸಾಧಿಸಬೇಕು ಎಂದರು.
ನಿಮಗೆ(ಕೊಡಗು/ಕೊಡವರಿಗೆ) ದೊಡ್ಡ ಅನ್ಯಾಯವಾಗಿದೆ. ಆದರೆ ಹೋರಾಟವನ್ನು ಮುಂದುವರಿಸಿ ” ಎಂದ ಸ್ವಾಮಿ, ಕೊಡಗಿಗೆ ಭೌಗೋಳಿಕ ರಾಜಕೀಯ ಸ್ವಾಯತ್ತ ಸ್ಥಾನಮಾನ ಪಡೆಯಲು ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ಉತ್ತರಾಖಂಡ್, ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ ಸುದೀರ್ಘ ಹೋರಾಟದ ನಂತರ ಪ್ರತ್ಯೇಕ ರಾಜ್ಯಗಳಾಗಿವೆ. ಕೊಡಗು ಸ್ವಾಯತ್ತ ನಾಡು ಏಕೆ ಆಗಬಾರದು?” ಎಂದು ಪ್ರಶ್ನಿಸಿದರು. ಮುಂದಿನ ವರ್ಷ ನವೆಂಬರ್ ವೇಳೆಗೆ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆಯಾಗಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮೋದಿ ಆಡಳಿತದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಮೋದಿಯನ್ನು ವಿರೋಧಿಸುತ್ತಿಲ್ಲ. ಆದರೆ ಚೀನಾವನ್ನು ಓಲೈಸುವ ಅವರ ನೀತಿಯನ್ನು ನಾನು ವಿರೋಧಿಸುತ್ತೇನೆ. ಅವರು ಚೀನೀಯರಿಗೆ ನಮ್ಮ ಪ್ರದೇಶವನ್ನು ಆಕ್ರಮಿಸಲು ಬಿಡಬಾರದು. ಭಾರತ ಅವರ ವಿರುದ್ಧ ಹೋರಾಡಬೇಕು. ಈಗಿನ ಸರ್ಕಾರದ ಕೆಲವು ತಪ್ಪು ಆರ್ಥಿಕ ನೀತಿಗಳನ್ನೂ ನಾನು ವಿರೋಧಿಸುತ್ತೇನೆ. ಬಿಜೆಪಿಯಲ್ಲಿ ನನ್ನನ್ನು ಬಿಟ್ಟು ಬೇರೆ ಯಾರಿಗೂ ತಪ್ಪು ನೀತಿಗಳನ್ನು ಪ್ರಶ್ನಿಸುವ ತಾಕತ್ತು ಇಲ್ಲ. ನಾನು ಹಲವು ಬಾರಿ ಮನವಿ ಮಾಡಿದರೂ ರಾಮಸೇತುವನ್ನು ಪಾರಂಪರಿಕ ತಾಣ ಎಂದು ಘೋಷಿಸಲು ಪ್ರಧಾನಿ ವಿಫಲರಾಗಿದ್ದಾರೆ ಎಂದರು.

LEAVE A REPLY

Please enter your comment!
Please enter your name here