ಬೆಂಗಳೂರು, ನ.25 – ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರು ವರ್ತೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಟಿಕೆಟ್ ಆಕಾಂಕ್ಷಿಯಾಗಿದ್ದ 60 ವರ್ಷದ ಶ್ರೀಶೈಲಪ್ಪ ಅವರು ಸಭೆಯ ಆರಂಭದಲ್ಲೇ ಅಸ್ವಸ್ಥರಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರೋಣ ಮತ್ತು ಗದಗ ಕ್ಷೇತ್ರಗಳಿಂದ ಬಿಜೆಪಿಯಿಂದ ತಲಾ ಒಂದು ಬಾರಿ ಶಾಸಕರಾಗಿದ್ದ ಶ್ರೀಶೈಲಪ್ಪ ಅವರಿಗೆ 2018ರಲ್ಲಿ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ 2019ರಲ್ಲಿ ಅವರು ಕಾಂಗ್ರೆಸ್ ಸೇರಿದ್ದು ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಮೃತ ಶ್ರೀಶೈಲಪ್ಪ ಅವರಿಗೆ ಕಾಂಗ್ರೆಸ್ ಸಂತಾಸ ಸೂಚಿಸಿದೆ.
ಇಂದು ನಿಗದಿಯಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಆಕಾಂಕ್ಷಿಗಳ ಸಭೆಯನ್ನು ಪಕ್ಷದ ಮಾಜಿ ಶಾಸಕರೂ, ಹಿರಿಯ ನಾಯಕರೂ ಆಗಿದ್ದ ಶ್ರೀಶೈಲಪ್ಪ ಬಿದರೂರು ಅವರ ಅಕಾಲಿಕ ನಿಧನದ ಕಾರಣ ಇದೇ ನವೆಂಬರ್ 27 ಕ್ಕೆ ಮುಂದೂಡಲಾಗಿದ್ದು ಸಭೆಯು ಅಂದು ಜೂಮ್ ಮೀಟಿಂಗ್ ಮೂಲಕ ನಡೆಯಲಿದೆ ಎಂದು ಈ ಮೂಲಕ ತಿಳಿಸುತ್ತೇವೆ. pic.twitter.com/jKF7LIlC8E
— Karnataka Congress (@INCKarnataka) November 25, 2022
ಶ್ರೀಶೈಲಪ್ಪ ಬಿದರೂರು ಅವರ ಅಕಾಲಿಕ ನಿಧನದ ಕಾರಣ ಇದೇ ನವೆಂಬರ್ 27ಕ್ಕೆ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಮುಂದೂಡಲಾಗಿದ್ದು ಸಭೆಯು ಅಂದು ಜೂಮ್ ಮೀಟಿಂಗ್ ಮೂಲಕ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.