‘ಪ್ರಧಾನಮಂತ್ರಿ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು ಕ್ರಮ ಕೈಗೊಳ್ಳದಿದ್ದರೆ ಅದು ವ್ಯವಸ್ಥೆಯ ಸಂಪೂರ್ಣ ಕುಸಿತ: ಸುಪ್ರೀಂ ಕೋರ್ಟ್ಅಚ್ಚರಿ

0
89
ನವದೆಹಲಿ,ನ. 23 – ಸ್ವತಂತ್ರ ಮತ್ತು ಸಚ್ಚಾರಿತ್ರ್ಯ ಹೊಂದಿರುವ ಮುಖ್ಯ ಚುನಾವಣಾ ಆಯುಕ್ತರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿಯವರ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು(CEC) ಕ್ರಮ ಕೈಗೊಳ್ಳದಿದ್ದರೆ ಅದು ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸಿದೆ.
ಪ್ರಸ್ತುತ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ಈಗಿರುವ ವ್ಯವಸ್ಥೆಯಂತೆ ಸೇವಾ ಹಿರಿತನದ ಆಧಾರದ ಮೇಲೆ ನ್ಯಾಯೋಚಿತವಾಗಿ ನೇಮಕಾತಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಗೆ ನಿನ್ನೆ ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.
ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಕಮಿಷನರ್ ಅರುಣ್ ಗೋಯೆಲ್ ಅವರ ನೇಮಕಾತಿಯನ್ನು ಸಹ ಪರಿಶೀಲನೆಗೆ ಒಳಪಡಿಸಿತು, ಅವರ ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಕೇಂದ್ರದಿಂದ ಕೇಳಿದ್ದು, ನೇಮಕಾತಿಯಲ್ಲಿ ಏನಾದರೂ ಅಕ್ರಮ ನಡೆದಿದೆಯೇ ಎಂದು ಕೂಡ ಸಂದೇಹ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಅಟೊರ್ನಿ ಜನರಲ್ ಆರ್ ವೆಂಕಟರಾಮಣಿಯವರಿಗೆ, ಉದಾಹರಣೆಗೆ ಚುನಾವಣಾ ಆಯುಕ್ತರಿಗೆ ಪ್ರಧಾನ ಮಂತ್ರಿಯವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ಅವರು ಇಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿತು.
ಉದಾಹರಣೆಗೆ ಪ್ರಧಾನ ಮಂತ್ರಿಯವರ ವಿರುದ್ಧ ಏನೋ ಒಂದು ಆರೋಪ ಬಂತು ಎಂದಿಟ್ಟುಕೊಳ್ಳಿ.ಮುಖ್ಯ ಚುನಾವಣಾ ಆಯುಕ್ತರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ಅವರು ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಆಗ ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ ಎಂದು ನ್ಯಾಯಮೂರ್ತಿ ಜೋಸೆಫ್ ಪ್ರಶ್ನಿಸಿದರು. ನ್ಯಾಯಪೀಠದಲ್ಲಿ ನ್ಯಾಯಾಧೀಶರುಗಳಾದ ಅಜಯ್ ರಸ್ತೊಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರು ಕೂಡ ಉಪಸ್ಥಿತರಿದ್ದರು.
ಮುಖ್ಯ ಚುನಾವಣಾ ಆಯುಕ್ತರನ್ನು ರಾಜಕೀಯ ಪ್ರಭಾವದಿಂದ ರಕ್ಷಿಸಬೇಕು, ಅವರು ಸ್ವತಂತ್ರವಾಗಿರಬೇಕು ಅವರು ವ್ಯಕ್ತಿತ್ವದಿಂದಲೇ ವ್ಯಕ್ತಿಯಾಗಬೇಕು. ನಮಗೆ ಚುನಾವಣೆಗೆ ಸ್ವತಂತ್ರ ಪ್ರಭಾವರಹಿತ ಸಂಸ್ಥೆ ಬೇಕೆ ಹೊರತು ಅದು ಕೇಂದ್ರ ಸಚಿವರುಗಳು, ಪ್ರಧಾನಿಯವರಿಂದ ಪ್ರಭಾವಕ್ಕೆ ಒಳಗಾಗಿರಬಾರದು ಎಂದು ನ್ಯಾಯಪೀಠ ಹೇಳಿದೆ.

LEAVE A REPLY

Please enter your comment!
Please enter your name here