ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಎಚ್‌ಡಿಕೆ: ಎಚ್.ಎ. ವೆಂಕಟೇಶ್

0
23
ಮ್ರೈಸೂರು, ನ.17  – ರಾಜ್ಯದ ರಾಜಕೀಯದಲ್ಲಿ ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಎರಡು ಬಾರಿ ಮುಖ್ಯಮಂತ್ರಿಯಾದ ಬಳಿಕವೂ, ಇವರು ಇಂದಿಗೂ ಸಹ ಅವಕಾಶವಾದಿ ಮತ್ತು ಅನೈತಿಕ ರಾಜಕಾರಣದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೆಪಿಸಿಸ ವಕ್ತಾರ ಎಚ್.ಎ. ವೆಂಕಟೇಶ್ ಕಿಡಿಕಾರಿದ್ದಾರೆ.
ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮುಖ್ಯಮಂತ್ರಿ ಹುದ್ದೆಗೊಂದು ಗತ್ತು ಘನತೆಯಿದೆ. ಇದನ್ನು ನಿರ್ವಹಿಸಿದ್ದವರು ಕೀಳು ಮಟ್ಟದ ವಯಕ್ತಿಕ ದಾಳಿಗಿಳಿಯುವುದು ಸಲ್ಲದ ಬೆಳವಣಿಗೆ. ಜನಹಿತಕ್ಕಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ವರುಣ ಮಾಜಿ ಶಾಸಕ ಡಾ. ಯತೀಂದ್ರ ಅವರ ಬಗ್ಗೆ ಆಧಾರವೇ ಇಲ್ಲದೆ ಆರೋಪಗಳನ್ನು ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹಗುರಗೊಳಿಸಿಕೊಳ್ಳುತ್ತಿದ್ದಾರೆ.
ವಿರುದ್ಧ ಸಿದ್ಧಾಂತದ ಪಕ್ಷಗಳ ನಡುವಿನ ಅನೈತಿಕ ಮೈತ್ರಿಯ ಕಾರಣದಿಂದ ಎಚ್‌ಡಿಕೆ ಸಾರ್ವಜನಿಕ ಜೀವನದಲ್ಲಿನ ಕಷ್ಟದ ಅನುಭವವಿಲ್ಲದೆ ಚಿಕ್ಕ ವಯಸ್ಸಿನಲ್ಲೇ ಮುಖ್ಯಮಂತ್ರಿಯಾದರು. ದಕ್ಕಿದ ಅವಕಾಶವನ್ನೂ ಇವರು ಒಳಿತಿಗೆ ಬಳಸದೇ ರಾಜ್ಯಕ್ಕೆ ಮೋಸ ಮಾಡಿದರು. ಎರಡನೇ ಅವಧಿಯನ್ನೂ  ಜನರು, ಶಾಸಕರು ಮತ್ತು ಮಂತ್ರಿಗಳ ಕಷ್ಟ ಆಲಿಸದೇ ಐಶಾರಾಮಿ ಜೀವನಕ್ಕೆ ಮುಡಿಪಿಟ್ಟರು. ಇದರ ಪರಿಣಾಮವನ್ನು ರಾಜ್ಯದ ಜನತೆ ಗಮನಿಸಿದ್ದಾರೆ.
ಅಧಿಕಾರಕ್ಕಾಗಿ ಹಪಹಪಿಸುವ ಮತ್ತು ಕುಟುಂಬ ಶ್ರೇಯಸ್ಸಿಗಷ್ಟೇ  ಶ್ರಮಿಸುವ ಎಚ್‌ಡಿಕೆ ಎಂದಿಗೂ ಜನಹಿತದ ಕೆಲಸ ಮಾಡಿಲ್ಲ. ತಮ್ಮದೇ ಜಾತಿಯ ಧೀಮಂತ ನಾಯಕರಾದ ಕೆ.ಎನ್. ನಾಗೇಗೌಡ, ವೈ.ಕೆ. ರಾಮಯ್ಯ ಇನ್ನಿತರ ಹಿರಿಯರನ್ನೂ ಸಹ ಇವರ ಕುಟುಂಬ ಬೆಳೆಯಲು ಬಿಟ್ಟಿಲ್ಲ. ಇಂಥಹವರು ತಾವೆಷ್ಟು ಉತ್ತಮರು ಎಂದು ಹೆಗಲು ತಟ್ಟಿ ಹೇಳಿಕೊಂಡರೂ ಜನತೆ ನಂಬುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.
ವರ್ಗಾವಣೆ ದಂಧೆ ಕುರಿತಾದ ಇವರ ಪೊಳ್ಳು ಆರೋಪ, ಪೆನ್‌ಡ್ರೈವ್ ಎಂಬ ಬುಟ್ಟಿಯಲ್ಲಿನ ಹಾವಿನ ಕತೆ, ವೈಎಸ್‌ಟಿ ಟ್ಯಾಕ್ಸ್ ಎಂಬ ಹೀಯಾಳಿಕೆ ಇತ್ಯಾದಿಗಳು ಹಿಂದುಳಿದ ವರ್ಗದ ನಾಯಕರು ನೀಡುವ ಜನಪರ ಆಡಳಿತವನ್ನು ಸಹಿಸಿಕೊಳ್ಳಲಾಗದ ಅಹಮಿಕೆಯ ಪ್ರದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಾರೆಯಾಗಿ ಸರ್ಕಾರವನ್ನು ಹೇಗಾದರೂ ಮಾಡಿ ಆರೋಪಿಸ್ಥಾನದಲ್ಲಿ ನಿಲ್ಲಿಸುವುದಷ್ಟೇ ಇವರ ಉದ್ದೇಶ ಎನ್ನುವುದು ಸ್ಪಷ್ಟ.
ಇನ್ನು ಜೆಡಿಎಸ್‌ನಂತೆಯೇ ರಾಜ್ಯ ಬಿಜೆಪಿ ಸಹ ಕುಟುಂಬಕ್ಕಷ್ಟೇ ಸೀಮಿತವಾಗಿ ಹೀನಾಯ ಸ್ಥಿತಿ ತಲುಪಿದೆ. ಬಿಎಸ್‌ವೈ ಹಿಡಿತದಿಂದ ಜಗದೀಶ ಶೆಟ್ಟರ್, ಲಕ್ಷ್ಮಣಸವದಿ ಮುಂತಾದ ನಾಯಕರು ಪಾರಾಗಿ ಸುರಕ್ಷಿತ ಪರ್‍ಯಾಯ ಕಂಡುಕೊಂಡರೆ, ಯತ್ನಾಳ ಸೇರಿ ಇನ್ನೂ ಹಲವು ನಾಯಕರು ಸಿಲುಕಿ ಒದ್ದಾಡುವಂತಾಗಿದೆ. ಜನಪರ ಆಡಳಿತವಿರುವ ರಾಜ್ಯದಲ್ಲಿ ಅನನುಭವಿಗೆ ರಾಜ್ಯಾಧ್ಯಕ್ಷರ ಹುದ್ದೆ ನೀಡಿ, ಬಿಜೆಪಿ ಹೆಚ್ಚು ಲೋಕಸಭೆ ಸೀಟುಗಳನ್ನು ಗೆಲ್ಲುತ್ತದೆ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳು ನಗು ತರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here