ಯಡಿಯೂರಪ್ಪ ರಾಜಕೀಯ ಸಲಹೆಗಾರ ಎಂ.ಬಿ ಮರಮಕಲ್ ನೇಮಕ ರದ್ದು: ಸಿಎಂ ಕುಟುಂಬಸ್ಥರ ಕೈವಾಡ?

0
55

ಬೆಂಗಳೂರು,ನ.16 – ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರರಾಗಿದ್ದ ಎಂ.ಬಿ.ಮರಮಕಲ್‌ ಅವರ ನೇಮಕಾತಿ ಆದೇಶವನ್ನು ರದ್ದುಪಡಿಸಿದ್ದು ಅಚ್ಚರಿ ಮೂಡಿಸಿದೆ.

ಜೆಡಿಎಸ್ ಶಾಸಕ ನಾಗಣ್ಣ ಕಂದಕೂರ್ ಅವರ ಪುತ್ರ ಶರಣ್ ಕಂದಕೂರ್ ಮತ್ತು ಶಿವನಗೌಡ ನಾಯಕ್ ನಡುವಿನ ವಿವಾದಾತ್ಮಕ ಸಭೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಎಂ.ಬಿ ಮರಮಕಲ್ ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಪತ್ರಕರ್ತರಾಗಿ ನಿವೃತ್ತರಾಗಿದ್ದ ಮರಮಕಲ್ ಅವರು, ಬಳಿಕ ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌–ಜೆಡಿಎಸ್ ಶಾಸಕರನ್ನು ಸೆಳೆಯುವಲ್ಲಿ ಮರಮಕಲ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಜೆಡಿಎಸ್ ಶಾಸಕರು ದೂರಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮರಮಕಲ್ ಅವರನ್ನು ರಾಜಕೀಯ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು.

2019ರ ಅಕ್ಟೋಬರ್‌ನಲ್ಲಿ ಮರಮಕಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತಲ್ಲದೇ, ರಾಜ್ಯ ಸಚಿವ ಶ್ರೇಣಿಯ ಸ್ಥಾನ ಹಾಗೂ ಸೌಲಭ್ಯವನ್ನೂ ನೀಡಲಾಗಿತ್ತು. ಇದೇ 13ರಿಂದ ಅನ್ವಯವಾಗುವಂತೆ ನೇಮಕಾತಿ ಆದೇಶ ರದ್ದು ಮಾಡಲಾಗಿದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಮರಮಕಲ್ ನೇಮಕ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಕುಟುಂಬಸ್ಥರ ಕೈವಾಡವಿದೆ ಎಂದು ಸಂಶಯ ವ್ಯಕ್ತ ಪಡಿಸಲಾಗಿದೆ.

Advertisements

LEAVE A REPLY

Please enter your comment!
Please enter your name here