“ಕಾಂಗ್ರೆಸ್ಸಿಗರು ʼತಾತ್ಕಾಲಿಕ ಮುಖ್ಯಮಂತ್ರಿʼ ಗೊಂದಲ ಮೊದಲು ಬಗೆಹರಿಸಿಕೊಳ್ಳಲಿ -ಆರ್. ರಘು.

0
133
ಮೈಸೂರು:  ʻತಾತ್ಕಾಲಿಕ ಮುಖ್ಯಮಂತ್ರಿʼ ಗೊಂದಲವನ್ನು ಕಾಂಗ್ರೆಸ್ಸಿಗರು ಮೊದಲು ಬಗೆಹರಿಸಿಕೊಳ್ಳಲಿ. ಸದ್ಯ ಕಾಂಗ್ರೆಸ್ ಪರಿಸ್ಥಿತಿ ʼಹರಿದ ಛತ್ರಿʼಯಂತಾಗಿದೆ ಎಂದು ಮೈಲ್ಯಾಕ್‌ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಆರ್‌ ರಘು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ರವರು ವಿಜಯೇಂದ್ರರ ನೇಮಕವನ್ನು ತಾತ್ಕಾಲಿಕ ಎಂದು ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ವಿಜಯೇಂದ್ರ ಯಡಿಯೂರಪ್ಪನವರು ರಾಜ್ಯ ಬಿ.ಜೆ.ಪಿಗೆ ನೂತನ ಅಧ್ಯಕ್ಷರಾಗಿ ನೇಮಕವಾದಾಗಿನಿಂದ ಕಾಂಗ್ರೆಸ್ಸಿಗರು ಹತಾಶೆಗೊಳಗಾಗಿ ವಿಚಲಿತರಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ ನಲ್ಲಿರುವ ಮುಖ್ಯಮಂತ್ರಿ ಬದಲಾವನೆ ಗೊಂದಲಕ್ಕೆ ಮೊದಲು ತೇಪೆ ಹಚ್ಚಿಕೊಳ್ಳಲಿ. ದಿನಕ್ಕೊಬ್ಬರು ಮುಖ್ಯ ಮಂತ್ರಿ ಆಕಾಂಕ್ಷಿಗಳು ಹುಟ್ಟಿಕೊಳ್ಳುವ ಮೂಲಕ ಪೂರ್ಣ ಬಹುಮತದ ಸರ್ಕಾರದಲ್ಲೂ ಅಸ್ಥಿರತೆ ತಾಂಡವವಾಡುತ್ತಿರುವುದರ ದ್ಯೋತಕವಾಗಿ ಮುಖ್ಯಮಂತ್ರಿ ಸ್ಥಾನವೇ ʼತಾತ್ಕಾಲಿಕʼ ಎಂಬ ಹಗ್ಗದ ಮೇಲೆ ನಡೆಯುತ್ತಿರುವಂತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅಭದ್ರತೆ ಕಾಡುತ್ತಿದೆ. ವಸ್ತು ಸ್ಥಿತಿ ಹೀಗಿರುವಾಗ ಬಿ.ಜೆ.ಪಿ ಸಂಘಟನೆ ಬಗ್ಗೆ
ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಳ್ಳುತ್ತಿರುವುದು ನೋಡಿದರೆ ಅವರ ಕಂಗೆಟ್ಟ ಪರಿಸ್ಥಿತಿಯ ಬಗ್ಗೆ ಕನಿಕರವೆನಿಸುತ್ತದೆ ಎಂದಿದ್ದಾರೆ.

ದೇಶದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಸ್ಥಿತಿ ಬಗ್ಗೆ ನೋಡುವುದಾದರೆ ʻವಿಶ್ವಕಪ್ ಕ್ರಿಕೆಟ್‌ನ ಅಂಕಪಟ್ಟಿಯಲ್ಲಿ ಶ್ರೀಲಂಕಾ ಸ್ಥಾನಕ್ಕೆ ಹೋಲಿಸಬಹುದಾದ ಪರಿಸ್ಥಿತಿಯಲ್ಲಿದೆ.ʼ ಇಂಥ ದಯನೀಯ ಸ್ಥಿತಿಯಲ್ಲಿದ್ದರೂ ಜನ-ಮನ ಗೆದ್ದು, ಸುಸ್ಥಿರತೆ ಮತ್ತು ದೇಶ ಬದ್ಧತೆಯಲ್ಲಿ ವಿಶ್ವ ರಾಜಕೀಯ ಭೂಪಟದಲ್ಲಿ ಅಗ್ರಸ್ಥಾನ ಪಡೆದಿರುವ ಬಿ.ಜೆ.ಪಿ ಕುರಿತು ಮಾತನಾಡಿದರೆ “ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ?” ಎಂಬ ಗಾದೆ ಮಾತು ನೆನಪಿಗೆ ತರಿಸುತ್ತಿದೆ.
ʻಬಸವ ತತ್ವʼ ಅನುಸರಿಸಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಿ.ಎಸ್. ಯಡಿಯೂರಪ್ಪನವರು, ಸರ್ವ ಸಮಾಜಗಳ ಅಭಿವೃದ್ಧಿಗೆ ಕೊಡುಗೆ ಕೊಟ್ಟವರು. ತಂದೆಯವರ ಆದರ್ಶವನ್ನು ಮೈಗೂಡಿಸಿಕೊಂಡು ಬೆಳೆದಿರುವ ವಿಜಯೇಂದ್ರರವರನ್ನು ಒಂದು ಸಮುದಾಯದ ಪ್ರತಿನಿಧಿಯಂತೆ ಪ್ರತಿಬಿಂಬಿಸುವ ಯತ್ನ ಕಾಂಗ್ರೆಸ್‌ನ ಸಂಕುಚಿತ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಸಂಘ ಸಂಸ್ಕಾರದ ತರಬೇತಿ ಪಡೆದು, ಪಕ್ಷ ಸಂಘಟನೆಯಲ್ಲಿ ತಳಮಟ್ಟದ ಕಾರ್ಯಕರ್ತರಾಗಿ, ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ ವಿಜಯೇಂದ್ರ ಈ ನಾಡಿನ ಜನರ ಮತ್ತು ಪಕ್ಷದ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾದವರು.
ವಿಶೇಷವಾಗಿ ಯುವ ಸಮಾಜದ ಭರವಸೆಯ ನೆಲೆಯಾಗಿ ನಿಂತ ವಿಜಯೇಂದ್ರ ಅವರ ನೇಮಕ ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಮತ್ತು ನೈಜ ರಾಜಕಾರಣದ ವ್ಯವಸ್ಥೆಯನ್ನು ಸಶಕ್ತಗೊಳಿಸುವ ದೃಷ್ಟಿಯಿಂದ ಅತ್ಯಂತ ಪೂರಕವಾಗಿದೆ. ಬಿ.ಜೆ.ಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ರಾಜ್ಯದಲ್ಲಿ ʼರಾಜಕೀಯ ದೀಪಾವಳಿʼ ಆಚರಿಸುತ್ತಿದ್ದಾರೆ. ಇದನ್ನು ಕಂಡು ಸಹಿಸದ ಕಾಂಗ್ರೆಸ್ಸಿಗರು ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

LEAVE A REPLY

Please enter your comment!
Please enter your name here