ನವದೆಹಲಿ,ಸೆ. 21 – ಕಾವೇರಿ ನದಿ ನೀರು ವಿಚಾರದಲ್ಲಿ ಸುಪ್ರೀಂಕೋರ್ಟ್ ನಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಡ್ಯಾಂಗಳು ಭರ್ತಿಯಾಗದೇ ರೈತರು ಜನರು ನೀರಿಗೆ ಹಾಹಾಕಾರ ಪಡುತ್ತಿದ್ದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಆದೇಶಿದೆ.
ತಮಿಳುನಾಡಿನ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕರ್ನಾಟಕ ನೀರು ಹರಿಸಿಲ್ಲ ಎಂದು ವಾದ ಮಂಡಿಸಿದ್ದಾರೆ.
ನಂತರ ಕರ್ನಾಟಕ ಪರ ವಾದ ಮಂಡಿಸಿದ ವಕೀಲ ಶ್ಯಾಮ್ ದಿವಾನ್, ಕರ್ನಾಟಕ ಈವರೆಗೆ ಆದೇಶ ಪಾಲಿಸಿದೆ. ಮಳೇ ಅಭಾವದಿಂದ ಡ್ಯಾಂಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ. ಕರ್ನಾಟಕದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ಆದರೆ ಇಲ್ಲಿ ಕುಡಿಯಲೂ ನೀರಿಲ್ಲ. ತಮಿಳುನಾಡಿಗೆ ಈ ಸಮಯದಲ್ಲಿ ನೀರು ಬಿಡಲು ಆಗಲ್ಲ. ಹೀಗಾಗಿ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಆದರೂ ಸಹ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಪ್ರಾಧಿಕಾರದ ಆದೇಶವನ್ನೇ ಎತ್ತಿ ಹಿಡಿದಿದ್ದು, ಕರ್ನಾಟಕದ ರೈತರು ಜನರಿಗೆ ಇದೀಗ ಆತಂಕ ಎದುರಾಗಿದೆ.