ಭಾರತ ಚಂದ್ರನನ್ನು ತಲುಪಿದೆ, ಪಾಕಿಸ್ತಾನ ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ: ಮಾಜಿ ಪ್ರಧಾನಿ ನವಾಜ್ ಷರೀಫ್

0
15

ಲಾಹೋರ್, ಸೆ.19 – ಭಾರತ ಚಂದ್ರನನ್ನು ತಲುಪಿ, ಜಿ20 ಶೃಂಗಸಭೆಯನ್ನು ಆಯೋಜಿಸಿರುವಾಗ ನಮ್ಮ ದೇಶ ವಿಶ್ವದ ಮುಂದೆ ಹಣ ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಮಂಗಳವಾರ ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ಅದರ ಆರ್ಥಿಕ ಸಮಸ್ಯೆಗಳಿಗೆ ದೇಶದ ಮಾಜಿ ಜನರಲ್‌ಗಳು ಮತ್ತು ನ್ಯಾಯಾಧೀಶರನ್ನು ದೂಷಿಸಿದ್ದಾರೆ.

ಪಾಕಿಸ್ತಾನದ ಆರ್ಥಿಕತೆಯು ಕಳೆದ ಹಲವು ವರ್ಷಗಳಿಂದ ಪತನದತ್ತ ಸಾಗುತ್ತಿದೆ. ಅನಿಯಂತ್ರಿತ ಎರಡಂಕಿಯ ಹಣದುಬ್ಬರದಿಂದ ಜನಸಾಮಾನ್ಯರ ತತ್ತರಿಸಿ ಹೋಗಿದ್ದಾರೆ ಎಂದು ತಮ್ಮ ದೇಶದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸಂಜೆ ಲಂಡನ್‌ನಿಂದ ವೀಡಿಯೊ ಲಿಂಕ್ ಮೂಲಕ ಲಾಹೋರ್‌ನ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಮಾಜಿ ಪ್ರಧಾನಿ ಷರೀಫ್, “ಭಾರತ ಚಂದ್ರನನ್ನು ತಲುಪಿ ಜಿ20 ಶೃಂಗಸಭೆಯನ್ನು ಬಹಳ ಯಶಸ್ವಿಯಾಗಿ ನಡೆಸಿದೆ. ಇಂದು ಪಾಕಿಸ್ತಾನದ ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಇದಕ್ಕೆ  ಯಾರು ಹೊಣೆ?” ಎಂದು ಪ್ರಶ್ನಿಸಿದರು.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ 73 ವರ್ಷದ ಸರ್ವೋಚ್ಚ ನಾಯಕ ಷರೀಫ್ ಅವರು, 1990 ರಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ ಎಂದು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ಭಾರತದ ವಿದೇಶಿ ವಿನಿಮಯ ಕೇವಲ ಒಂದು ಶತಕೋಟಿ ಡಾಲರ್‌ಗಳಷ್ಟಿತ್ತು. ಆದರೆ ಈಗ ಅದು 600 ಶತಕೋಟಿ ಡಾಲರ್‌ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ? ಪಾಕಿಸ್ತಾನ ಭಿಕ್ಷಾಟನೆಯಿಂದ ಎಲ್ಲಿದೆ? ಎಂದು ಪ್ರಶ್ನಿಸಿದರು.

ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಅವರು ಪಾಕಿಸ್ತಾನದ ಈ ಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ.

LEAVE A REPLY

Please enter your comment!
Please enter your name here