ಬಿಜೆಪಿ ಮತ್ತು ಆರ್ ಎಸ್ ಎಸ್‌ ನ ಬೇನಾಮಿ ಚೈತ್ರಾ ಕುಂದಾಪುರ: 185 ಕೋಟಿ ವ್ಯವಹಾರ, 17ಕ್ಕೂ ಹೆಚ್ಚು ಜನರಿಗೆ ಮೋಸ- ಎಂ ಲಕ್ಷ್ಮಣ್ ಆರೋಪ.

0
15

ಮೈಸೂರು,ಸೆ.19 – ಚೈತ್ರಾ ಕುಂದಾಪುರ ಬಿಜೆಪಿ ಆರ್ ಎಸ್ ಎಸ್‌ ನ ಬೇನಾಮಿ. ಇನ್ನು ಎರಡು ದಿನದಲ್ಲಿ ಇವರ ಹಿಂದೆ ಇರುವ ಗುಂಪು, ಎಷ್ಟು ಹಣ ಪಡೆದಿದ್ದಾರೆ, ಯಾರಿಗೆ ಹೋಗಿದೆ ಅನ್ನುವುದನ್ನು ಪೋಲೀಸರು ಕೊಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿಯ ವ್ಯವಹಾರ ಇಲ್ಲಿ ಆಗಿದೆ. ಟಿಕೆಟ್ ನೀಡಿ ಕೋಟ್ಯಾಂತರ ಹಣ ಪಡೆಯಲಾಗಿದೆ. ಚೈತ್ರಾ ಕುಂದಾಪುರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ. ಮೈಸೂರು ಭಾಗದಲ್ಲೂ ಇಬ್ಬರು ಹಣ ಕೊಟ್ಟು ಕಳೆದುಕೊಂಡಿದ್ದಾರೆ. 9 ಜನರ ತಂಡದಿಂದ ಮೋಸದ ಕೃತ್ಯ ನಡೆದಿದೆ. ಇವರೆಲ್ಲಾ ಬಿಜೆಪಿ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತರು. ಬಿಜೆಪಿ ಹರಿಶ್ಚಂದ್ರನ ಮೊಮ್ಮಕ್ಕಳು ಅನ್ನುತ್ತಾರೆ. ಇವರ ಯೋಗ್ಯತೆ ಏನು ಅನ್ನೋದು ಬಹಿರಂಗಪಡಿಸಬೇಕು. ಪಿಎಸ್‌ಐ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯಾ ಅನ್ನೋ ಬಗ್ಗೆ ತನಿಖೆಯಾಗಬೇಕು ಸಿ ಟಿ ರವಿ ಯಡಿಯೂರಪ್ಪ ಸೂಲಿಬೆಲೆ ಜೊತೆ ಈಕೆಯ ಸಂಬಂಧ ಏನು ಅನ್ನೋದನ್ನು ಸ್ಪಷ್ಟಪಡಿಸಬೇಕು. ಚೈತ್ರಾ ಪಿಎಸ್‌ ಐ ಹಾಗೂ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಚೈತ್ರಾಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯಾ ?

ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ ಗೋವಿಂದ ಕಾರಜೋಳ ರಾಜ್ಯ ಪ್ರವಾಸ ವಿಚಾರ ಕುರಿತು ವ್ಯಂಗ್ಯವಾಡಿದ ಎಂ.ಲಕ್ಷ್ಮಣ್,  ಇದು ರಾಜಕೀಯ ನಿವೃತ್ತರ ಕಮಿಟಿ. ಇವರು ಡಿ.ಕೆ ಶಿವಕುಮಾರ್ ವಿರುದ್ದ ರಣ ಕಹಳೆ ಅಂತಿದ್ದಾರೆ. ಇದರಲ್ಲಿ ಇರುವವರೆಲ್ಲರೂ ಕಳಂಕಿತರೆ. ಬಿ ಎಸ್ ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದವರು. ಕೆ ಎಸ್ ಈಶ್ವರಪ್ಪ ಗುತ್ತಿಗೆದಾರರಿಂದ ಹಣ ಪಡೆದ ಆರೋಪಿ. ಕಟ್ಟಾ ಸುಬ್ರಮಣ್ಯ ನಾಯ್ಡು ಮೇಲೂ ಭ್ರಷ್ಟಾಚಾರದ ಆರೋಪವಿದೆ. ರಾಜ್ಯದಲ್ಲಿ ಬರ ಇದೆ.  ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯಾ ? ಯಡಿಯೂರಪ್ಪ ನರೇಂದ್ರ ಮೋದಿ ಅವರಿಗಿಂತ ಸೀನಿಯರ್. ನೀವು ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಹೊರಟಿದ್ದೀರಾ. ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿ ಆಗಲು ಯಾರು ಬೇರೆ ಗಂಡಸರು ಇಲ್ಲವಾ..? ಎಂದು ಗುಡುಗಿದರು.  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು‌ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನೀರು ಬಿಟ್ಟಿರುವುದು ಗದ್ದೆಗಳಿಗೆ.

ರಾಜ್ಯದ ಜಲಾಶಯದಲ್ಲಿ 42 ಟಿಎಂಸಿ ನೀರು ಇದೆ. ಇದರಲ್ಲಿ ಬೆಂಗಳೂರಿನ ಕುಡಿಯುವ ನೀರಿಗೆ 24 ಟಿಎಂಸಿ ಬೇಕಾಗಿದೆ. 25 ಟಿಎಂಸಿ ಮೈಸೂರು ಭಾಗಕ್ಕೆ ಬೇಕಾಗಿದೆ. 2024 ಜೂನ್‌ ವರೆಗೂ ಇಷ್ಟು ನೀರು ಕುಡಿಯಲು ಬೇಕಾಗಿದೆ. ನಾವು‌ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನಾವು ನೀರು ಬಿಟ್ಟಿರುವುದು ಗದ್ದೆಗಳಿಗೆ. ಸೆಪ್ಟಂಬರ್ 8 ರಂದೇ ನೀರು ಬಂದ್ ಮಾಡಲಾಗಿದೆ. ಈಗ ಬಿಟ್ಟಿರುವ ನೀರು ಕಾಲುವೆಗಳಿಗೆ ಹೋಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸ್ಪಷ್ಟನೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33 % ರಷ್ಟು ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಮೀಸಲಾತಿಯ ಹಿಂದೆ ಸೋನಿಯಾ ಗಾಂಧಿ ಅವರ ಶ್ರಮವಿದೆ. ಈ ಬಗ್ಗೆ ಸೋನಿಯಾ, ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆಯೇ ಕೇಂದ್ರದಲ್ಲಿ ಒಕ್ಕೂಟ ಸರಕಾರ ಇದ್ದಾಗ ಈ ಬಗ್ಗೆ ಪ್ರಸ್ತಾಪಸಲಾಗಿತ್ತು ಆದರೆ ಮೈತ್ರಿ ಒಕ್ಕೂಟದಲ್ಲಿ ಸ್ವಲ್ಪ ತಡವಾಯಿತು. ಹೈದರಾಬಾದ್ ನಲ್ಲಿ INDIA ಒಕ್ಕೂಟ ಸಭೆ ನಡೆದಿದ್ದರಿಂದ ಬಿಜೆಪಿಗರು ವಿಚಲಿತರಾಗಿದ್ದಾರೆ. ಮಹಿಳಾ ಮೀಸಲಾತಿಯ 33% ನಲ್ಲಿಯೂ ಇಂಟರ್ನಲ್ ಕೋಟಾ ಕೊಡಬೇಕು ಎಂದು ಎಂ ಲಕ್ಷ್ಮಣ್ ಒತ್ತಾಯಿಸಿದರು.

LEAVE A REPLY

Please enter your comment!
Please enter your name here