ಕಳೆದ ವರ್ಷ ಬಿಡುಗಡೆಗೊಂಡ ಕಾಂತಾರ ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ ೧೦ ಅವಾರ್ಡ್ ಗಳನ್ನು ಬಾಚಿಕೊಂಡಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ “ಕಾಂತಾರ”, ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆಗಳಿಸಿತ್ತು.ಪ್ರಸ್ತುತ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು ೩ ಅವಾರ್ಡ್ ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ. ವಿಶೇಷವಾಗಿ “ಕಾಂತಾರ” ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ “ಸೈಮಾ” ಪ್ರಶಸ್ತಿ ಪಡೆದಿದ್ದಾರೆ. ಇಂತಹ ಜಗಮೆಚ್ಚಿದ ಚಿತ್ರದ ನಿರ್ದೇಶಕರಾದ ರಿಷಭ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಬೇಕು.
ಉಳಿದಂತೆ ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿದಂತೆ ಒಟ್ಟು ೧೦ ಅವಾರ್ಡ್ಸ್ ಕಾಂತಾರ ಸಿನಿಮಾ ಗೆದ್ದು ಸದ್ದು ಮಾಡಿದೆ. ಇದುವರೆಗೆ ಸೈಮಾ ಅವಾರ್ಡ್ಸ್ ನಲ್ಲಿ ಅತೀ ಹೆಚ್ಚು ಅವಾರ್ಡ್ ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಒಟ್ಟಾರೆ ಕನ್ನಡ ಸಿನಿಮಾ ಈ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂಬುದು ಹೆಮ್ಮೆಯ ವಿಷಯ. ಇದೀಗ “ಕಾಂತಾರ ೨” ಚಿತ್ರ ಬರವಣಿಗೆ ಹಂತದಲ್ಲಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.