ಶ್ರೀಲಂಕಾವನ್ನು ಮಣಿಸಿ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ!

0
7

ಕೊಲಂಬೊ, ಸೆ. 17 – ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿ ಭಾರತ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡಿದ್ದಾರೆ.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಮಾರಕವಾಗಿ ಕಾಡಿದರು. ಹೀಗಾಗಿ ಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ 51 ರನ್ ಗಳ ಗುರಿ ನೀಡಿತ್ತು. ಈ ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಭಾರತ 6.1 ಓವರ್ ಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತ ಪರ ಇಶಾನ್ ಕಿಶನ್ ಅಜೇಯ 23 ಮತ್ತು ಶುಭ್ಮನ್ ಗಿಲ್ ಅಜೇಯ 27 ರನ್ ಬಾರಿಸಿದ್ದಾರೆ.

ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕುಸಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಶ್ರೀಲಂಕಾಕ್ಕೆ ದೊಡ್ಡ ಹೊಡೆತ ನೀಡಿದರು. ಇದರ ನಂತರ, ಸಿರಾಜ್ ಅವರು ತಮ್ಮ ಮೊದಲ ಓವರ್‌ನಲ್ಲಿ ಮೇಡನ್ ಪಡೆದರು. ನಂತರದ ಓವರ್‌ನಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ಮೊಹಮ್ಮದ್ ಸಿರಾಜ್ ಅವರು ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾಗೆ ಪಾಥುಮ್ ನಿಸ್ಸಾಂಕ ಕ್ಯಾಚ್ ನೀಡಿದರು. ಇದಾದ ಬಳಿಕ ಮೂರನೇ ಎಸೆತದಲ್ಲಿ ಸದಿರಾ ಔಟಾದರು. ಅಸಲಂಕಾ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು. ಸಿರಾಜ್ ಹ್ಯಾಟ್ರಿಕ್ ಮಿಸ್ ಆದರೆ ಕೊನೆಯ ಎಸೆತದಲ್ಲಿ ಧನಂಜಯ್ ಗೆ ಪೆವಿಲಿಯನ್ ಹಾದಿ ತೋರಿಸಿ ನಾಲ್ಕನೇ ವಿಕೆಟ್ ಪಡೆದರು.

ಲಂಕಾ ಪರ ಬ್ಯಾಟಿಂಗ್ ನಲ್ಲಿ ಕುಶಾಲ್ ಮೆಂಡಿಸ್ 17 ಮತ್ತು ದುಶನ್ ಹೇಮಂತ್ 13 ರನ್ ಸಿಡಿಸಿದ್ದು ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಮತ್ತು ಜಸ್ ಪ್ರೀತ್ ಬುಮ್ರಾ 1 ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here