ಅನಂತ್ನಾಗ್, ಬಾರಾಮುಲ್ಲಾದಲ್ಲಿ ಮುಂದುವರಿದ ಎನ್ಕೌಂಟರ್
ಶ್ರೀನಗರ, ಸೆ.16 – ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಶನಿವಾರ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಮುಂಚೂಣಿ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಸೇನೆಪಡೆ ನಡುವೆ ಇಂದು ಬೆಳಿಗ್ಗೆ ಎನ್‌ಕೌಂಟರ್ ಪ್ರಾರಂಭವಾಯಿತು. ಈ ವೇಳೆ ಸೇನಾಪಡೆಗಳ ಕಾರ್ಯಾಚರಣೆಗೆ ಬಾರಾಮುಲ್ಲಾ ಪೊಲೀಸರು ಕೂಡ ಕೈಜೋಡಿಸಿದರು.
ಈ ವೇಳೆ ಉಗ್ರರ ಅಡಗಿ ಕುಳಿತಿರುವ ಸ್ಥಳವನ್ನು ಸುತ್ತುವರೆದ ಪೊಲೀಸರು ಹಾಗೂ ಸೇನಾಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಅಡಗಿ ಕುಳಿತಿದ್ದು, ಉಗ್ರರ ಹೆಡೆಮುಡಿ ಕಟ್ಟಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಶನಿವಾರ 4 ನೇ ದಿನಕ್ಕೆ ಕಾಲಿಟ್ಟಿದೆ. ಭಯೋತ್ಪಾದಕರ ಪತ್ತೆಗೆ ಡ್ರೋಣ್ಗಳನ್ನು ಕೂಡ ಬಳಸಲಾಗುತ್ತಿದೆ.
ಅನಂತನಾಗ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಉಗ್ರರ ಗುಂಡಿನ ದಾಳಿಗೆ ಒಟ್ಟು ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಸೇರಿದಂತೆ ನಾಲ್ವರು ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
ಮತ್ತೊಂದೆಡೆ, ಕಾಶ್ಮೀರದ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು ಬಿಗಿ ಬಂದೋಬಸ್ತ್ ಮಾಡಿವೆ. ಕೊಕರ್ನಾಗ್‌ನ ಗಡೋಲ್‌ನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಭಯೋತ್ಪಾದಕರನ್ನು ಪತ್ತೆಹಚ್ಚಿ ಹತ್ಯೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಸದ್ಯ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಭಯೋತ್ಪಾದಕರ ಹುಡುಕಾಟಕ್ಕೆ ಸೇನೆಯು ಡ್ರೋಣ್ ಗಳನ್ನು ಕೂಡ ಬಳಸುತ್ತಿದೆ, ಅವರ ಕ್ಯಾಮೆರಾಗಳು ಭಯೋತ್ಪಾದಕರ ಚಲನವಲನವನ್ನು ಸಹ ಸೆರೆಹಿಡಿದಿವೆ. ಭಯೋತ್ಪಾದಕರು ಬೆಟ್ಟಗಳು ಮತ್ತು ಅರಣ್ಯಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.