ವಿಕ್ರಮ್ ಲ್ಯಾಂಡರ್ ಅನ್ನು ಕಾರ್ಯಾಚರಣೆಗೆ ನಿಯೋಜಿಸಿ ಮತ್ತೆ ನಿದ್ರೆಗೆ ಜಾರಿಸಿದ ಇಸ್ರೋ: ಸೆ.22ರಂದು ಎಚ್ಚರಗೊಳ್ಳಲಿದೆ

0
15

ಬೆಂಗಳೂರು, ಸೆ.4 – ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ನ ‘ಹಾಪಿಂಗ್’ ಪರೀಕ್ಷೆಯ ಮಹತ್ವದ ಯಶಸ್ಸಿನ ಬಳಿಕ ಇದೀಗ ಇಸ್ರೋ ವಿಜ್ಞಾನಿಗಳು ಮತ್ತೆ ಲ್ಯಾಂಡರ್ ಅನ್ನು ನಿದ್ರೆಗೆ ಜಾರಿಸಿದ್ದಾರೆ.

ಹೌದು.. ಇಸ್ರೋ ತನ್ನ ವಿಕ್ರಮ್ ಲ್ಯಾಂಡರ್ ನ ಹಾಪ್ ಪರೀಕ್ಷೆಯ ಬಳಿಕ ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ಗೆ ಹೊಂದಿಸಿದೆ. ಇಂದು ಬೆಳಗ್ಗೆ ಸುಮಾರು 8 ಗಂಟೆ ವೇಳೆ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ಗೆ ಹಾಕಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

ಈ ಕಾರ್ಯಾಚರಣೆಗೂ ಮೊದಲು ವಿಕ್ರಮ್ ಲ್ಯಾಂಡರ್ ಅನ್ನು ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಇಂದು ಮುಂಜಾನೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಮತ್ತೆ ಸಾಫ್ಟ್ ಲ್ಯಾಂಡಿಂಗ್ ಮಾಡಿದಾಗ ಹಾಪ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಜ್ಞೆಯ ಮೇರೆಗೆ ಅದು (ವಿಕ್ರಮ್ ಲ್ಯಾಂಡರ್) ಎಂಜಿನ್‌ಗಳನ್ನು ಹಾರಿಸಿತು, ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30 ರಿಂದ 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು. ಆ ಮೂಲಕ ವಿಕ್ರಮ್ ಲ್ಯಾಂಡರ್ ನ ChaSTE, RAMBHA-LP ಮತ್ತು ILSA ಪೇಲೋಡ್‌ಗಳ ಇನ್-ಸಿಟು ಪ್ರಯೋಗಗಳನ್ನು ಹೊಸ ಸ್ಥಳದಲ್ಲಿ ನಡೆಸಲಾಗುತ್ತದೆ. ಪ್ರಸ್ತುತ ಪೇಲೋಡ್‌ಗಳನ್ನು ಈಗ ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್‌ಗಳನ್ನು ಆನ್ ಮಾಡಲಾಗಿದೆ.

ವಿಕ್ರಮ್ ಲ್ಯಾಂಡರ್ ಸ್ಲೀಪಿಂಗ್ ಮೋಡ್ ನಲ್ಲಿದ್ದು ಅದರ ರಿಸೀವರ್ ಗಳ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಚಂದ್ರನಲ್ಲಿ ರಾತ್ರಿಯಾದ ಕಾರಣ ಅಲ್ಲಿ ರೋವರ್ ಮತ್ತು ಲ್ಯಾಂಡರ್ ಗೆ ಸರಬರಾಜಾಗುತ್ತಿದ್ದ ಸೌರಶಕ್ತಿ ಸ್ಥಗಿತವಾಗಿದೆ. ಹೀಗಾಗಿ ಅವುಗಳ ಬ್ಯಾಟರಿ ಖಾಲಿಯಾಗದಂತೆ ನೋಡಿಕೊಂಡು ಉಭಯ ನೌಕೆಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಲಾಗಿದೆ. ಸೆಪ್ಟೆಂಬರ್ 22, 2023 ರ ಸುಮಾರಿಗೆ ಚಂದ್ರನಲ್ಲಿ ಸೂರ್ಯ ಬೆಳಕು ಪ್ರವೇಶ ಮಾಡಲಿದ್ದು ಆಗ ಮತ್ತೆ ರೋವರ್ ಮತ್ತು ಲ್ಯಾಂಡರ್ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎಂದು ಇಸ್ರೋ ಹೇಳಿದೆ.

ವಿಕ್ರಮ್ ಲ್ಯಾಂಡರ್ ಹಾಪ್ ಪರೀಕ್ಷೆಯೂ ಯಶಸ್ವಿ: ವಿಜ್ಞಾನಿಗಳಲ್ಲಿ ಹೊಸ ಆಶಾಭಾವ
ನಿನ್ನೆಯಷ್ಟೇ ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳನ್ನು ಸ್ಲೀಪಿಂಗ್ ಮೋಡ್ ನಲ್ಲಿರಿಸಿದ್ದ ಇಸ್ರೋ ವಿಜ್ಞಾನಿಗಳು ಇಂದು ಮಹತ್ವದ ಕಾರ್ಯಾಚರಣೆಗಾಗಿ ವಿಕ್ರಮ್ ಲ್ಯಾಂಡರ್ ನನ್ನು ಮಾತ್ರ ಎಚ್ಚರಿಸಿ ‘ಹಾಪ್’ ಪರೀಕ್ಷೆ ನಡೆಸಿದ್ದರು. ಈ ಹಾಪ್ ಪರೀಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸ್ಲೀಪಿಂಗ್ ಮೋಡ್ ನಲ್ಲಿರಬೇಕಾದರೇ ಅದಕ್ಕೆ ಕಿಕ್ ಸ್ಟಾರ್ಟ್ ಮಾಡಿ ಅದರ ಎಂಜಿನ್ ಗಳನ್ನು ಕೆಲ ಸೆಕೆಂಡ್ ಗಳ ಕಾಲ ಹೊತ್ತಿಸಿ ಅದರ ಸ್ಥಾನ ಪಲ್ಲಟ ಮಾಡುವುದಾಗಿತ್ತು. ಈ ಪರೀಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದ್ದು, ಎಂಜಿನ್ ಉರಿಯುತ್ತಿದ್ದಂತೆಯೇ ಸುಮಾರು 40 ರಿಂದ 50 ಸೆಂಮೀ ಮೇಲಕ್ಕೆ ಹಾರಿದ ಲ್ಯಾಂಡರ್ ಬಳಿಕ ಸುರಕ್ಷಿತವಾಗಿ ಮತ್ತೆ ಚಂದ್ರನ ಮೇಲೆ ಲ್ಯಾಂಡ್ ಆಗಿದೆ.

LEAVE A REPLY

Please enter your comment!
Please enter your name here