ಮೈಸೂರು,ಆ. 25 – ಆರ್ ಆರ್ ನಗರದಲ್ಲಿ ಕಾಮಗಾರಿ ಎಸ್ಟೀಮೇಟ್ ಗಿಂತ ಹೆಚ್ಚು ಹಣ ಪಡೆಯಲಾಗಿದ್ದು ಸರ್ಕಾರಕ್ಕೆ ನಷ್ಟವಾಗಿದೆ ಎಂದು ಲೋಕಯುಕ್ತವೇ ವರದಿ ನೀಡಿದೆ. ಹೀಗಾಗಿ ಸಚಿವ ಮುನಿರತ್ನ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆ ಬಿಡುಗಡೆ ಮಾಡಿದರು.
ಸಚಿವ ಮುನಿರತ್ನಂ ಕ್ಷೇತ್ರ ಆರ್ ಆರ್ ನಗರದಲ್ಲಿ ಕಾಮಗಾರಿ ಎಸ್ಟೀಮೇಟ್ ಗಿಂತ ಹೆಚ್ಚು ಹಣ ಪಡೆಯಲಾಗಿದೆ. ಈ ಬಗ್ಗೆ ಸಂಸದ ಡಿ ಕೆ ಸುರೇಶ್ ಲೋಕಾಯುಕ್ತಗೆ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 118.75 ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ ಅಂತಾ ಲೋಕಯುಕ್ತ ವರದಿ ನೀಡಿದೆ. ವರದಿ ಕೊಟ್ಟ ಮೇಲೂ 40 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 114 ಕಾಮಗಾರಿಯಲ್ಲಿ ಈ ರೀತಿ ಹಣ ಪಡೆಯಲಾಗಿದೆ. 24/01/2022 ರಂದು ಲೋಕಾಯುಕ್ತ ವರದಿ ಸಿದ್ದವಾಗಿ ಜೂನ್ 2022ರಂದು ಲೋಕಾಯುಕ್ತ ಸರ್ಕಾರಕ್ಕೆ ವರದಿ ನೀಡಿದೆ. ಹೀಗಾಗಿ ಮುನಿರತ್ನ ಅವರಿಂದ ಸಿಎಂ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಕಾಮಗಾರಿ ಮಾಡದೆ 5 ಸಾವಿರ ಕೋಟಿ ಹಣ ಪಡೆಯಲಾಗಿದೆ. ದಾಖಲೆ ಇಲ್ಲಿದೆ ಏಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ? ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.