ಎನ್‍ಐ ಗ್ರೂಪ್ ವಶದಲ್ಲಿದ್ದ ಮುಡಾ ನಿವೇಶನ ತೆರವು

0
2549

* ಅನೇಕ ವರ್ಷಗಳ ನಂತರ ತಮ್ಮ 10 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಆಸ್ತಿ ವಶಕ್ಕೆ ಪಡೆದ ಪ್ರಾಧಿಕಾರ.
* ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂಗಳ್ಳರ ವಂಚನೆಗೆ ಸಿಕ್ಕಿ ನಿವೇಶನ ಖರೀದಿಸಿದ್ದ ಎನ್‍ಐ ಗ್ರೂಪ್.
* ಈ ಕ್ರಮದಿಂದ ಭೂಗಳ್ಳರಿಗೆ `ಸರ್ಕಾರದ ಸ್ವತ್ತು ಯಾವತ್ತಿದ್ದರೂ ಸರ್ಕಾರದ್ದೇ, ಬೇರೆಯವರ ಸ್ವತ್ತಾಗದು’ ಎಂಬ ಸಂದೇಶ.

ಮೈಸೂರು,ಆ.25 – ನಗರದ ರಾಜೀವನಗರ ಬಡಾವಣೆಯ ವರ್ತುಲರಸ್ತೆಯಲ್ಲಿ ಸರ್ಕಾರಿ ನಿವೇಶನದಲ್ಲಿ ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ನಿವೇಶನಕ್ಕೆ ಪೊಲೀಸ್ ಕಾವಲಿನೊಂದಿಗೆ ಮುಡಾ ಅಧಿಕಾರಿಗಳು ನುಗ್ಗಿ ಅತಿಕ್ರಮಣಕಾರರನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ಎಂದಿದ್ದರೂ ಸರ್ಕಾರದ್ದೇ ಎನ್ನುವುದನ್ನು ತೋರಿಸಿಕೊಟ್ಟ ಘಟನೆ ನಡೆದಿದೆ.

ಬುಧವಾರ ಬೆಳಿಗ್ಗೆ ಸಾತಗಳ್ಳಿ ವೃತ್ತದ ಬಸ್ ನಿಲ್ದಾಣದ ಸಮೀಪದ ಸರ್ವೆ ನಂ.274ರಲ್ಲಿದ್ದ ಅಂದಾಜು 10 ಕೋಟಿ ರೂ.ಗಳಿಗೂ ಹೆಚ್ಚು ಬೆಲೆ ಬಾಳುವ ಸುಮಾರು 1  ಎಕರೆಗೂ ಹೆಚ್ಚು ಪ್ರದೇಶಕ್ಕೆ ಖಾಸಗಿಯವರು(ಎನ್‍ಐ ಗ್ರೂಪ್) ಹಾಕಿದ್ದ ಬೇಲಿ ಹಾಗೂ ಕಟ್ಟಿದ್ದ ಚಿಕ್ಕ ಮನೆಯೊಂದನ್ನು ತೆರವು ಮಾಡಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡರು.


ಸುಮಾರು 11 ಗಂಟೆಯ ಸಮಯದಲ್ಲಿ ಮುಡಾ ಆಯುಕ್ತ ಡಾ.ಬಿ.ಬಿ.ನಟೇಶ್ ಅವರ ನೇತೃತ್ವದಲ್ಲಿ ಪ್ರಾಧಿಕಾರದ ವಿವಿಧ ವಿಭಾಗಗಳು ಹಾಗೂ ವಲಯಗಳ ಅಧಿಕಾರಿಗಳು, ಉದಯಗಿರಿ ಪೊಲೀಸ್ ಠಾಣೆ, ಸಿಆರ್‍ಪಿ ಹಾಗೂ ಕೆಎಸ್‍ಆರ್‍ಪಿಯ ಒಂದೊಂದು ತಂಡ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು.
ಆದರೆ ಅತಿಕ್ರಮಣಕಾರರು ತೆರವುಗೊಳಿಸಲು ಬಿಡದೆ ತಮ್ಮ ವಕೀಲರ ಮೂಲಕ ವಾದ ಮುಂದುವರೆಸಿದ್ದರು. ವಕೀಲರಿಗೆ ದೇವರಾಜ ವಿಭಾಗದ ಎಸಿಪಿ ಶಶಿಧರ್ ಅವರು ಎಷ್ಟೇ ತಿಳಿವಳಿಕೆ ಹೇಳಿದರೂ ಕೇಳದೆ ವಕೀಲರು ವಾದ ಮುಂದುಚರೆಸಿದ್ದರು. ಜೆಸಿಬಿ ಒಳಗೆ ಹೋಗಲು ಬಿಡದೆ ಕೆಲವರು ಅಡ್ಡ ಹಾಕಿದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಲು ಬಂದವರನ್ನು ಪೊಲೀಸರು ಬಂಧಿಸಲು ಮುಂದಾದಾರು.


ಅದೇ ಸಮಯಕ್ಕೆ ಉಪ ಪೊಲೀಸ್ ಆಯುಕ್ತ ಪ್ರಕಾಶ್ ಗೌಡ ಅವರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಅವರು `ನ್ಯಾಯಾಲಯದ ಆದೇಶವನ್ನೂ ನಾವೂ ಗೌರವಿಸುತ್ತೇವೆ. ಆದರೆ ನೀವು ತಂದಿರುವ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಧಿಕಾರ ವಶಪಡಿಸಿಕೊಳ್ಳಲು ಬಂದಿರುವುದು ಸರ್ವೆ ನಂ.274. ಆದರೆ ನಿಮ್ಮದು ಎಂದು ಹೇಳುತ್ತಿರುವ ನಿವೇಶನದ ಸರ್ವೆ ನಂ.275 ಅದು ಪಕ್ಕದಲ್ಲಿದೆ. ಮುಡಾ ಅಧಿಕಾರಿಗಳುಉ ಅದನ್ನು ಮುಟ್ಟುವುದಿಲ್ಲ. ಈಗ ಕರ್ತವ್ಯಕ್ಕೆ ತೊಂದರೆ ಮಾಡ ಬೇಕಿದೆ, ಅಧಿಕಾರಿಗಳು ತಮ್ಮ ಕೆಲಸ ಮಾಡಲು ಅವಕಾಶಕೊಡಿ’ ಎಂದು ತಿಳಿವಳಿಕೆ ಹೇಳಿದರು.
ಗೊಂದಲದ ವಾತಾವರಣ ಶಾಂತವಾಗಲು ಸುಮಾರು 2 ಗಂಟೆಗಳ ಸಮಯ ಹಿಡಿಯಿತು. ನಂತರ ಜೆಸಿಬಿ ಒಳಗೆ ನುಗ್ಗಿ ಅಲ್ಲಿ ಕಾವಲುಗಾರಿಗೆ ಕಟ್ಟಿದ್ದ ಚಿಕ್ಕ ಮನೆಯನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತ ಪ್ರಕಾಶ್ ಗೌಡ, ಎಸಿಪಿ ಶಶಿಧರ್, ಉದಯಗಿರಿ ಠಾಣೆಯ ಇನ್‍ಸ್ಪೆಕ್ಟರ್ ಪೂಣಚ್ಚ, ಪಿಎಸ್‍ಐ ಜಯಕೀರ್ತಿ ಹಾಗೂ ಸಿಬ್ಬಂದಿಗಳು, ನಜರಬಾದ್ ಠಾಣೆಯ ಇನ್‍ಸ್ಪೆಕ್ಟರ್
ಶ್ರೀಕಾಂತ್, ಸಿಆರ್ಪಿ, ಕೆಎಸ್‍ಆರ್‍ಪಿ ಸಿಬ್ಬಂದಿಗಳಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಬಿ.ಬಿ.ನಟೇಶ್, ಎಸ್‍ಇ ಎಸ್.ಶಂಕರ್, ವಲಯ-5ಬಿ ಎಇಇ ಮೋಹನ್ ಹಾಗೂ ಮುಡಾದ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅತಿಕ್ರಮಣ ಮಾಡಿಲ್ಲ, ಖರೀದಿಸಿದ್ದೆವು:

 

ಮೈಸೂರು: ನಾವು ಎನ್‍ಐ ಗ್ರೂಪ್ ವತಿಯಿಂದ ಕೆಲ ವರ್ಷಗಳ ಹಿಂದೆ ಈ ನಿವೇಶನವನ್ನು ಖರೀದಿಸಿದ್ದೆವು. ದಾಖಲೆಗಳ ಪರಿಶೀಲನೆ ವೇಳೆ ಮುಡಾ ಅಧಿಕಾರಿಗಳು ನಮಗೆ ದಾರಿ ತಪ್ಪಿಸಿರುವ ಕಾರಣ ವ್ಯಕ್ತಿಯೊಬ್ಬರಿಗೆ ಸೇರಿದ್ದ ಈ ನಿವೇಶನ ಎಂದು ನಂಬಿ ಖರೀದಿಸಿದ್ದೇವೆ. ಇದಲ್ಲದೆ ಅವನು ನಮಗೆ ತೋರಿಸಿದ ಸ್ಥಳವೂ ಸರ್ವೆ ನಂ. ಬದಲಾಗಿದೆ. ಇದು ನಮ್ಮಿಂದ ತಿಳಿಯದೇ ಆಗಿರುವುದರಿಂದ ಪ್ರಾಧಿಕಾರದವರು ನಾವು ವಂಚನೆಗೆ ಒಳಗಾಗಿರುವುದನ್ನು ಗಣನೆಗೆ ತೆಗೆದುಕೊಂಡು ಬದಲಿ ನಿವೇಶನ ಕೊಡಬೇಕೆಂದು ಪ್ರಾರ್ಥಿಸುತ್ತೇವೆ.
-ರಿಯಾಜ್ ಪಾಷ, ಇಲಿಯಾಜ್ ಬೇಗ್, ಎನ್‍ಐ ಗ್ರೂಪ್

 

 

– ಸಾಲೋಮನ್

 

 

LEAVE A REPLY

Please enter your comment!
Please enter your name here