ಅಯೋಧ್ಯೆ,ಆ.5 – ಶ್ರೀ ರಾಮನ ಮಂದಿರಕ್ಕಾಗಿ ಕಾಯುವಿಕೆ ಅಂತ್ಯವಾಗಲಿದ್ದು, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬುಧುವಾರ ಆಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ನೆರವೇರಿಸಿ ಬಳಿಕ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಜೈ ಶ್ರೀರಾಮ ಘೋಷಣೆಯ ಈ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಎಲ್ಲರಿಗೂ ಅಭಿನಂದನೆಗಳು. ಇಡೀ ಭಾರತ ಬಾವುಕವಾಗಿದೆ. ಬಹುಕಾಲದ ನಿರೀಕ್ಷೆ ಇಂದು ಕೊನೆಯಾಗಿದೆ ಎಂದು ಹೇಳಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದಾನೆ. ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು. ಇದೀಗ ರಾಮ ಜನ್ಮ ಸ್ಥಳ ಅಯೋಧ್ಯೆಯಲ್ಲಿ ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ’.
‘ಸ್ವಾತಂತ್ರ್ಯ ಹೋರಾಟದ ಸಂದರ್ಭ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್ 15 ಎನ್ನುವುದು ಇಂಥ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕೆನ್ನುವ ಭಾವನೆಗಳ ಪ್ರತೀಕ. ಇದೂ ಅಷ್ಟೇ. ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವು ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ರಾಮ ಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಮತ್ತು ತರ್ಪಣ ಇತ್ತು. ಸಂಘರ್ಷ ಮತ್ತು ಸಂಕಲ್ಪ ಇತ್ತು. ಅವರೆಲ್ಲರಿಗೂ ದೇಶದ 130 ಕೋಟಿ ದೇಶವಾಸಿಗಳ ಪರವಾಗಿ ಕೈಮುಗಿದು ನಮಿಸುತ್ತೇನೆ.
ಇತಿಹಾಸ ಪುಟಗಳಲ್ಲಿ ಏನೆಲ್ಲಾ ಆಗಿ ಹೋದರು ರಾಮ ನಮ್ಮ ಮನದಲ್ಲಿ ವಿರಾಜಮಾನನಾಗಿದ್ದಾನೆ, ಸಂಸ್ಕೃತಿಯ ಆಧಾರವಾಗಿದ್ದಾನೆ. ರಾಮನ ಭವ್ಯದಿವ್ಯ ಮಂದಿರಕ್ಕಾಗಿ ಇಂದು ಭೂಮಿಪೂಜೆ ಆಗಿದೆ. ಇಲ್ಲಿಗೆ ಬರುವ ಮೊದಲು ನಾನು ಹನುಮಂತನ ಗುಡಿಗೆ ಹೋಗಿದ್ದೆ. ರಾಮನ ಕೆಲಸಗಳನ್ನು ಹನುಮ ಶ್ರದ್ಧೆಯಿಂದ ಮಾಡುತ್ತಿದ್ದ. ರಾಮನ ಮಂದಿರ ನಿರ್ಮಾಣದಿಂದ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಷ್ಟೇ ಅಲ್ಲ. ಇಲ್ಲಿನ ವಾತಾವರಣವೇ ಬದಲಾಗಲಿದೆ. ಸುಪ್ರೀಂಕೋರ್ಟ್ ತೀರ್ಪು ಕೊಟ್ಟಾಗ ದೇಶವಾಸಿಗಳು ಶಾಂತಿಯಿಂದ ನಡೆದುಕೊಂಡರು. ಇಂದೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದರು.
ನಿರಂತರ ಹೋರಾಟದ ನಂತರ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ರಾಮಮಂದಿರ ನಿರ್ಮಾಣವಾದರೆ ದೇಶದ ಪೂರ್ಣ ಅರ್ಥ ವ್ಯವಸ್ಥೆ ಬದಲಾಗಲಿದೆ. ರಾಮಮಂದಿರ ದೇಶವನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿ ಮೂಡಿಬರಲಿದೆ. ಹೊಸ ಇತಿಹಾಸ ರಚನೆಯಷ್ಟೇ ಅಲ್ಲ, ಇತಿಹಾಸವನ್ನು ಶುದ್ಧಗೊಳಿಸಲಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲರೂ ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದಂತೆ ಇಂದು ಶ್ರೀರಾಮಮಂದಿರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ.
ಶ್ರೀರಾಮ ಎಂದು ಬರೆದ ಕಲ್ಲುಗಳಿಂದ ಸೇತುವೆ ನಿರ್ಮಿಸಿದಂತೆ ರಾಮಮಂದಿರವೂ ನಿರ್ಮಾಣವಾಗಲಿದೆ. ಅನೇಕತೆಯಲ್ಲಿ ಏಕತೆಯನ್ನು ತಂದುಕೊಡಬಲ್ಲವನು ರಾಮ. ಪ್ರತಿಯೊಂದು ಸಮುದಾಯ, ದೇಶದವರೂ ರಾಮ. ರಾಮಾಯಣದ ಜತೆಗೆ ನಂಟು ಹೊಂದಿದ್ದಾರೆ. ಭಾರತದಲ್ಲೇ ಒಂದೊಂದು ರಾಜ್ಯದಲ್ಲಿ ಒಂದೊಂದು ರಾಮಾಯಣದ ಕಥೆ ಸಿಗುತ್ತದೆ. ವಿದೇಶಗಳಲ್ಲೂ ರಾಮಕಥಾ ವಿವರಣೆ, ರಾಮಾಯಣದ ವಿವರಣೆ ಸಿಗುತ್ತದೆ. ನಮ್ಮ ಅರಿವು, ಜೀವನಾದರ್ಶಗಳು ಜಗತ್ತಿನಾದ್ಯಂತ ಹೇಗೆ ಪಸರಿಸಿದೆ ನೋಡಿ. ಅಯೋಧ್ಯಾ ಕೇಂದ್ರ ಸ್ಥಾನವಾಗಿ ಎಲ್ಲೆಲ್ಲಿ ರಾಮ, ರಾಮಾಯಣ ಪಸರಿಸಿಕೊಂಡಿದೆಯೋ ಅವೆಲ್ಲವನ್ನೂ ಜೋಡಿಸುವ ಸರ್ಕೀಟ್ ರಚನೆಯಾಗಲಿದೆ. ಸದ್ಯ ನಾವೆಲ್ಲರೂ ಮುನ್ನಡೆಯಬೇಕು. ಭಾರತವೂ ಮುನ್ನಡೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮಾಡಬೇಕು. ಎಲ್ಲರಿಗೂ ಆರೋಗ್ಯ ನೀಡುವಂತೆ ಶ್ರೀರಾಮಚಂದ್ರ, ಸೀತಾದೇವಿಯರಲ್ಲಿ ಕೇಳಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು.