ಮೈಸೂರು,ಜೂನ್,14 – ದಿನೇ ದಿನೇ ಕೋವಿಡ್ 4ನೇ ಅಲೆ ಭೀತಿ ಆರಂಭವಾಗುವ ಮುನ್ಸೂಚನೆ ಸಿಗುತ್ತಿದೆ. ಎಲ್ಲೆಡೆ ಮತ್ತೆ ಆತಂಕ ಆರಂಭ ಆಗಿದ್ದು, ಈ ನಡುವೆ ಕಿಲ್ಲರ್ ಕೋವಿಡ್ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೊರೊನಾ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಳ ಆಗುತ್ತಿದೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿಯಿಲ್ಲ ಎಂದು ಹೇಳಿದರು.
ಶಾಲಾ-ಕಾಲೇಜಿಗೆ ರಜೆ ಇಲ್ಲ: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಕೊಡುವ ಪರಿಸ್ಥಿತಿ ಸದ್ಯಕ್ಕಿಲ್ಲ. ಒಂದು ತರಗತಿಯಲ್ಲಿ ೧೦ ರಿಂದ ೧೨ ಮಕ್ಕಳಿಗೆ ಕೊರೊನಾ ಪಾಸಿಟಿವ್ ಆದರೆ ಆ ತರಗತಿಗೆ ಮಾತ್ರ ರಜೆ ಕೊಡಲಾಗುವುದು. ಆ ಪ್ರಮಾಣ ಹೆಚ್ಚಾದರೆ ಮಾತ್ರ ಒಂದು ವಾರ ಶಾಲೆಗೆ ರಜೆ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಹೆಚ್ಚು ಪರೀಕ್ಷೆ ಅಗತ್ಯವಿಲ್ಲ: ಕೊರೊನಾ ಪರೀಕ್ಷೆ ಹೆಚ್ಚಿಸುವ ಅಗತ್ಯತೆ ಕಾಣುತ್ತಿಲ್ಲ. ಮಕ್ಕಳಲ್ಲಿ ಇದರ ತೀವ್ರತೆ ತುಂಬಾ ಕಡಿಮೆಯಿದೆ. ೧೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಸೂಚನೆ ಬಂದಿಲ್ಲ. ಕೋವಿಡ್ ಏರುಗತಿ ನೋಡಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚೆಚ್ಚು ಕೋವಿಡ್ ಪರೀಕ್ಷೆ ನಡೆಸಲು ಸರ್ಕಾರ ಅಗತ್ಯ ಸಿದ್ಧತೆ ನಡೆಸುತ್ತಿದೆ ಎಂದರು.
ಮಾಸ್ಕ್ ಕಡ್ಡಾಯವಾಗಿ ಧರಿಸಿ: ಮಾಸ್ಕ್ ಕಡ್ಡಾಯವಾಗಿ ಧರಿಸಿದರೆ ಒಳ್ಳೆಯದು. ರಾಜ್ಯದಲ್ಲಿ ಮತ್ತೆ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗುವುದು. ೪ನೇ ಅಲೆ ಅರಭವಾಗುವ ಮೊದಲೇ ಕೋವಿಡ್ ಹಾವಳಿಯನ್ನು ನಿಯಂತ್ರಿಸಬೇಕು. ಹರಡುವಿಕೆ ಪ್ರಮಾಣ ಇಳಿಸಬೇಕು. ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಇದೇ ವೇಳೆ ಆರೋಗ್ಯ ಸಚಿವರು ಮನವಿ ಮಾಡಿದರು.
ಭಯ ಬೇಡ ಎಚ್ಚರಿಕೆ ಅಗತ್ಯ: ಎಲ್ಲರೂ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ರಾಮಬಾಣ. ಕೊರೊನಾ ಬಗ್ಗೆ ಭಯ ಬೇಡ. ಆದರೆ ಖಂಡಿತ ನಿರ್ಲಕ್ಷ್ಯ ಬೇಡ. ಮೊದಲನೇ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಅವಾಂತರ ಆಗಿತ್ತು. ಸರ್ಕಾರದ ಜೊತೆ ಜನರ ಸಹಕಾರ ಅತ್ಯಗತ್ಯ ಎಂದು ಸುಧಾಕರ್ ತಿಳಿಸಿದರು.