ವೈವಿದ್ಯಮಯ ಜೀವ ಸಂಕುಲವನ್ನು ಸಂರಕ್ಷಿಸಬೇಕಿದೆ: ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

0
42

ಮೈಸೂರು,ಜೂ. 5 – ‘ನಮ್ಮ ರಸ್ತೆ ಬದಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿರುವ ಜೀವವೈವಿಧ್ಯವನ್ನು ಅರಿತು ಅದನ್ನು ಸಂರಕ್ಷಿಸಬೇಕು’ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮರ ಗಣತಿ ದತ್ತಾಂಶ’ ಬಿಡುಗಡೆ ಹಾಗೂ ಗಣತಿಯ ಮಾಹಿತಿ ಒಳಗೊಂಡ ಜಾಲತಾಣ (hಣಣಠಿs://vಡಿuಞshಚಿ.ಛಿom/)ವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
‘ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಹೆಚ್ಚಿನ ಹೊಣೆಗಾರಿಕೆ ಇದೆ. ನಮ್ಮ ಮನೆಯ ಸುತ್ತಮುತ್ತಲಿನ ಪರಿಸರದ ರಕ್ಷಣೆ, ಬೀದಿಬದಿಯ ಮರಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನಾವೇ ಹೊರಬೇಕು. ಅವುಗಳ ಬಗ್ಗೆ ತಿಳಿದುಕೊಂಡು, ಇತರರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದರೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದಂತಾಗುತ್ತದೆ’ ಎಂದು ತಿಳಿಸಿದರು.
‘ಪರಿಸರವನ್ನು ಉಳಿಸಬೇಕು ಎನ್ನುವ ಸಂದೇಶ ಹಿಂದೆಂದಿಗಿಂತಲೂ ಈಗ ಬಹಳ ಮುಖ್ಯವಾಗಿದೆ. ಹವಾಮಾನ ಬದಲಾವಣೆಯಿಂದ ನಾವೆಲ್ಲರೂ ಹಿಂದೆಂದೂ ನೋಡದಿರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಮಳೆಗಾಲವಲ್ಲದ ಸಂದರ್ಭದಲ್ಲಿ ಜೋರು ಮಳೆಯಾಗುತ್ತಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವತ್ತ ನಮ್ಮೆಲ್ಲರ ಲಕ್ಷ್ಯ ಇರಬೇಕಾಗುತ್ತದೆ’ ಎಂದರು.
‘ಮೈಸೂರಿನಲ್ಲಿರುವ ಮರಗಳ ಮಾಹಿತಿ ಸಂಗ್ರಹಿಸಲು ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನ ಮುಂದಾಗಿರುವುದು ಶ್ಲಾಘನೀಯ. ಅರಮನೆ ಆವರಣದಲ್ಲೂ ಮರಗಳ ಗಣತಿ ವಿವರ ನಡೆಸಲು ಅವಕಾಶ ಕೊಡಲಾಗುವುದು’ ಎಂದು ಹೇಳಿದರು.
‘ಮಹಾರಾಜರ ಕಾಲದಲ್ಲಿ ಪ್ರತಿ ರಸ್ತೆಯಲ್ಲೂ ನೆರಳಿರಲೆಂದು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಿದ್ದರು. ನಾನು ಚಿಕ್ಕವನಿದ್ದಾಗ, ಮೈಸೂರು-ಬೆಂಗಳೂರು ರಸ್ತೆಯ ಎರಡೂ ಬದಿಯಲ್ಲೂ ಮರಗಳಿದ್ದವು. ಅಭಿವೃದ್ಧಿಯ ಕಾರಣದಿಂದ ಈಗ ಬಹಳಷ್ಟು ಕಡೆಗಳಲ್ಲಿ ಮರಗಳು ಇಲ್ಲವಾಗಿವೆ. ಮರಗಳ ವಿಷಯದಲ್ಲಿ ಹಿಂದಿನ ವೈಭವ ಮರುಕಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಆಶಿಸಿದರು.
ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದ ಸಂಸ್ಥಾಪಕ ವಿಜಯ್ ನಿಶಾಂತ್ ಮಾತನಾಡಿ, ‘ಬೆಂಗಳೂರು ನಂತರ ಮೈಸೂರಿನಲ್ಲಿ ಮರಗಳ ಗಣತಿ ಕಾರ್ಯವನ್ನು ಮಾಡಿದ್ದೇವೆ. ಸ್ವಯಂ ಸೇವಕರು, ಅದರಲ್ಲೂ ಮಹಿಳಾ ಗಣತಿದಾರರನ್ನು ಈ ಕಾರ್ಯದಲ್ಲಿ ಬಳಸಿದ್ದು ವಿಶೇಷವಾಗಿದೆ. ನಮ್ಮೆಲ್ಲರ ಉಸಿರಾಟಕ್ಕಾಗಿ ಗಿಡ-ಮರಗಳನ್ನು ಉಳಿಸಿಕೊಳ್ಳಬೇಕು’ ಎಂದರು.
‘4 ವರ್ಷಗಳಿಂದ ಇಲ್ಲಿ ಗಣತಿ ನಡೆಸಲಾಗಿದೆ. ಮರಗಳ ಮಾಹಿತಿಯನ್ನು ಬಡಾವಣೆವಾರು ಜಾಲತಾಣದಲ್ಲಿ ಅಳವಡಿಸಲಾಗಿದೆ’ ಎಂದು ತಿಳಿಸಿದರು.
ಇದೇ ಸಂಸರ್‍ಭದಲ್ಲಿ ಗಣತಿಗೆ ಸಹಕರಿಸಿದ ತೇಜಸ್ವಿ, ನಿಖಿಲ್, ಹರ್ಷ ಮೊದದಲಾದವರನ್ನು ಸನ್ಮಾನಿಸಲಾಯಿತು. ಶಿಲ್ಪಾ ನಿರೂಪಿಸಿದರು.

LEAVE A REPLY

Please enter your comment!
Please enter your name here