ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 288ಕ್ಕೆ ಏರಿಕೆ; ಮಾನವ ದೋಷ, ಸಿಗ್ನಲ್ ವೈಫಲ್ಯ ಅಪಘಾತಕ್ಕೆ ಕಾರಣ

0
59
ಬಹನಾಗ, ಜೂ.3 – ಇಡೀ ದೇಶವನ್ನೇ ತಲ್ಲಣಗೊಳಿಸಿ ಮಹಾ ಭೀಕರ ಅಪಘಾತ  ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಹಲವಾರು ಪ್ರಯಾಣಿಕರು ಇನ್ನೂ ರೈಲುಗಳಲ್ಲಿ ಸಿಕ್ಕಿಬಿದ್ದಿರುವ ಸಾಧ್ಯತೆ ಇದ್ದು, ಗಾಯಾಳುಗಳ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗಬಹುದು.
ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಭುವನೇಶ್ವರದಿಂದ ಸುಮಾರು 180 ಕಿಮೀ ದೂರದಲ್ಲಿರುವ ಬಹನಾಗ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ಲೂಪ್ ಲೈನ್ ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರೈಲಿನ ಕನಿಷ್ಠ 12 ಬೋಗಿಗಳು ಪಲ್ಟಿಯಾಗಿ ಪಕ್ಕದ ಹಳಿ ಮೇಲೆ ಬಿದ್ದಿವೆ. ಇದೇ ವೇಳೆ ಪಕ್ಕದ ಟ್ರ್ಯಾಕ್ ನಲ್ಲಿ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಚದುರಿದ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಅಪಘಾತ ಸಂಭವಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ಗಂಟೆಗೆ 128 ಕಿಮೀ ವೇಗದಲ್ಲಿ ಚಲಿಸುತ್ತಿದ್ದರೆ, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಗಂಟೆಗೆ 116 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು  ರೈಲ್ವೆ ಮಂಡಳಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಖರಗ್‌ಪುರ ರೈಲ್ವೆ ವಿಭಾಗದ ಅಧಿಕಾರಿಗಳ ಆರಂಭಿಕ ಜಂಟಿ ತಪಾಸಣಾ ವರದಿಯ ಪ್ರಕಾರ, ಟ್ರ್ಯಾಕ್ ಜಾಯಿಂಟ್‌ಗಳನ್ನು ತಪ್ಪಾಗಿ ಇರಿಸಲಾಗಿದೆ ಮತ್ತು ಸ್ಟೇಷನ್ ಮಾಸ್ಟರ್‌ ಕೊಠಡಿಯಲ್ಲಿ ಸರಿಯಾದ ಸಿಗ್ನಲ್ ನೀಡಲು ವಿಫಲವಾಗಿದ್ದಾರೆ.

LEAVE A REPLY

Please enter your comment!
Please enter your name here