* ಈ ಮೂಲಕ ವೈದ್ಯಕೀಯ ಸಮೂಹಕ್ಕೆ ಗೌರವ ಸಮರ್ಪಣೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.
ಮೈಸೂರು, ಮೇ.28 – ಜುಲೈ 1ರಂದು ವೈದ್ಯರ ದಿನಾಚರಣೆ ಇದೆ. ಆ ವೇಳೆಗೆ ಕೊರೊನಾ ಮುಕ್ತ ಮೈಸೂರು ಮಾಡುವ ಮೂಲಕ ವೈದ್ಯಕೀಯ ಸಮೂಹಕ್ಕೆ ಗೌರವ ಸಲ್ಲಿಸುವ ಕೆಲಸ ಆಗಬೇಕು ಎಂಬುದು ನಮ್ಮ ಗುರಿ ಮತ್ತು ಆಶಯವಾಗಿದೆ. ಕೊರೊನಾ ಮುಕ್ತ ಮೈಸೂರು ಅಭಿಯಾನ ಆರಂಭಿಸಿದ್ದೇವೆ. ಈ ನಿಟ್ಟಿನಲ್ಲಿ ಮೈಸೂರಿನ ಜನತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದರು.
ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಕರ್ತರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ರಾಜ್ಯದ ಸರಾಸರಿಗೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಸಾವುಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಮೈಸೂರಿನಲ್ಲಿ ಲಸಿಕೆ ಪ್ರಮಾಣ ದೇಶದಲ್ಲೇ ಅತಿ ಹೆಚ್ಚು ಆಗಿರುವುದು ಈ ಸಾವಿನ ಪ್ರಮಾಣ ಕಡಿಮೆಯಾಗಲು ನೆರವಾಗಿದೆ. ಎಂದರು.
ಇತರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಲಿಸಿದರೆ ವ್ಯಾಕ್ಸಿನೇಷನ್ ಹೆಚ್ಚಿನ ಮಟ್ಟದಲ್ಲಿ ಮೈಸೂರಿನಲ್ಲಿ ಯಶಸ್ವಿ ಆಗಿದೆ. ಕೊರೊನಾ ವೈರೆಸ್ ವಿರುದ್ಧ ಹೋರಾಡಲು ಇರುವ ಆಯುಧವೆಂದರೆ ವ್ಯಾಕ್ಸಿನೇಷನ್ ಆಗಿದೆ. ಹೀಗಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವಂತೆ ಹೇಳಿದರು.
ಪತ್ರಕರ್ತರು ಸಹ ಮುಂಚೂಣಿ ಕಾರ್ಯಕರ್ತರಾಗಿದ್ದಾರೆ. ರಾಜ್ಯ ಸರ್ಕಾರವು ಸಹ ಬಿಡುಗಡೆ ಮಾಡಿರುವ 25 ವರ್ಗಗಳ ಮುಂಚೂಣಿ ಕಾರ್ಯಕರ್ತರ ಪಟ್ಟಿಯಲ್ಲಿ ಪತ್ರಕರ್ತರ ಹೆಸರು ಇದೆ. ಕೋವಿಡ್ ಲಕ್ಷಣಗಳು ಕಂಡುಬಂದರೆ ಕೋವಿಡ್ ಮಿತ್ರಕ್ಕೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ನಾಳೆಯಿಂದ ಜಿಲ್ಲೆಯಲ್ಲಿ ಪೂರ್ಣ ಮಟ್ಟದ ಲಾಕ್ ಡೌನ್ ಇದ್ದು, ರಾಜ್ಯ ಸರ್ಕಾರದ ನಿಯಮದಂತೆ ಲಾಕ್ ಡೌನ್ ನಡೆಯಲಿದೆ. ಇದನ್ನೆ ಪಾಲನೆ ಮಾಡಬೇಕಿದೆ. ಸೋಮವಾರ ಹಾಗೂ ಗುರುವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಜನರ ಸಹಾಯಕ್ಕಾಗಿ ಕೋವಿಡ್ ವಾರ್ ರೂಂ ತೆರೆಯಲಾಗಿದೆ. ಬಿಬಿಎಂಪಿ ಬಿಟ್ಟರೆ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಟೆಸ್ಟಿಂಗ್ ಆಗುತ್ತಿದೆ. ಹೀಗಾಗಿ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆ ಮಟ್ಟದಲ್ಲಿ ಇದೆ. ಇದಕ್ಕೆ ಕೋವಿಡ್ ಮಿತ್ರದ ಸಲಹೆಗಳು ಹಾಗೂ ವ್ಯಾಕ್ಸಿನೇಷನ್ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಆರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಉಪಾಧ್ಯಕ್ಷ ಅನುರಾಗ್ ಬಸವರಾಜು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ರಾಘವೇಂದ್ರ, ಮತ್ತಿತರರು ಉಪಸ್ಥಿತರಿದ್ದರು.