ಕೋವಿಡ್ ಹಿನ್ನೆಲೆ: ಉನ್ನತಾಧಿಕಾರಿಗಳ ಸಭೆ ನಡೆಸಿ, ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

0
69
ಮೈಸೂರು, ಏ. 20 – ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಮಂಗಳವಾರ ಜಿಲ್ಲೆಯ ಉನ್ನತಾಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು.
ಮುಂದಿನ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಬೆಡ್ ಗಳನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದ್ದು, ಆಕ್ಸಿಜನ್, ವೆಂಟಿಲೇಟರ್ ಬೆಡ್ ಗಳು ಮತ್ತು ಲಸಿಕೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿದಿನ ಸಾಮಾನ್ಯ ಹಾಸಿಗೆ ಲಭ್ಯತೆ, ಆಕ್ಸಿಜನ್ ಹಾಸಿಗೆ ಲಭ್ಯತೆ, ವೆಂಟಿಲೇಟರ್ ಲಭ್ಯತೆ ಮುಂತಾದ ಮಾಹಿತಿಯನ್ನು ಪ್ರಕಟಿಸಿದರೆ ಜನರ ಆತಂಕ ಕಡಿಮೆಯಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಕೋವಿಡ್ ಪ್ರಕರಣ ವೇಗವಾಗಿ ಹರಡುತ್ತಿದೆ. ಆದರೆ ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಸೀಮಿತ ಸಂಖ್ಯೆಯ ಜನರು ಭಾಗವಹಿಸುವಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಹೇಳಿದರು.
ಕೋವಿಡ್ ನಿರ್ವಹಣೆಗೆ ಸರ್ಕಾರದಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಡಲಾಗುವುದು. ಲಸಿಕೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಸೂಕ್ತವಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಮೈಸೂರು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ನಾಟಕ ಪ್ರದರ್ಶನಗಳು ಹೆಚ್ಚಾಗಿ ಮೂಡಿಬರುತ್ತಿದ್ದು, ಅನುಮತಿ ಪಡೆಯದೆ ಯಾರಾದರೂ ನಾಟಕಗಳನ್ನು ಮಾಡಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಜಿ‌.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ನಂಜರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಪ್ರಸಾದ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಎಸ್.ಸೀತಾಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here