ಕೇಂದ್ರದ ವಿರುದ್ಧ: 14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ …!

0
50

ನವದೆಹಲಿ,ಮಾ.24-  ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ 14 ವಿರೋಧ ಪಕ್ಷಗಳು ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಏಪ್ರಿಲ್ 5 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದಂತಹ(ಇಡಿ) ಸಂಸ್ಥೆಗಳು ಬಿಜೆಪಿಯ ವಿರೋಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಪಕ್ಷಗಳು ಹೇಳಿವೆ. ವಿರೋಧಿಗಳು ಬಿಜೆಪಿಗೆ ಸೇರಿದ ನಂತರ ಆ ನಾಯಕರ ಮೇಲಿನ ಪ್ರಕರಣಗಳನ್ನು ಆಗಾಗ್ಗೆ ಕೈಬಿಡಲಾಗುತ್ತದೆ ಎಂದು ಆರೋಪಿಸಿವೆ.

ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಿಪಕ್ಷಗಳ ಪರವಾಗಿ ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಮಿತಿ, ಎರಡು ವಾರಗಳಲ್ಲಿ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ಬಂಧನದ ಪೂರ್ವ ಮತ್ತು ನಂತರದ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ. ತನಿಖೆ ನಡೆಸುತ್ತಿರುವ ಶೇಕಡ ತೊಂಬತ್ತೈದು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧ ಇವೆ. ನಾವು ಬಂಧನ ಪೂರ್ವ ಮತ್ತು ಬಂಧನದ ನಂತರದ ಮಾರ್ಗಸೂಚಿಗಳನ್ನು ಕೇಳುತ್ತಿದ್ದೇವೆ’ ಎಂದು ಸಿಂಘ್ವಿ ಹೇಳಿದರು.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜನತಾ ದಳ(ಯು), ಭಾರತ್ ರಾಷ್ಟ್ರ ಸಮಿತಿ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ನ್ಯಾಷನಲ್ ಕಾನ್ಫರೆನ್ಸ್, ನ್ಯಾಶನಲಿಸ್ಟ್ ಕಾಂಗ್ರೆಸ್‌, ಎಡಪಕ್ಷಗಳು ಮತ್ತು ಡಿಎಂಕೆ ಒಟ್ಟಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿವೆ.

Advertisements

LEAVE A REPLY

Please enter your comment!
Please enter your name here