ಚುನಾವಣೆ ಅಕ್ರಮಗಳ ಬಗ್ಗೆ ಹೆಚ್ಚಿನ‌ ನಿಗಾ ವಹಿಸಿ: ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೂಚನೆ

0
33
ಮೈಸೂರು ,ಮಾ.21 –  ಸಾರ್ವಜನಿಕರಿಗೆ ಉಡುಗೊರೆ, ಊಟ, ಹಣ ಮತ್ತಿತರ ರೀತಿಯಲ್ಲಿ ಆಮಿಷ  ಒಡ್ಡಿ ಚುನಾವಣಾ ಅಕ್ರಮಗಳು ನಡೆಯುವ  ಸಂಬಂಧ ಚುನಾವಣೆ ಕೆಲಸಕ್ಕೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ವಿಧಾನ ಸಭಾ ಚುನಾವಣೆ ಸಂಬಂಧ ಮಂಗಳವಾರ ನಡೆದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈಗಾಗಲೇ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನುಮಾನಸ್ಪದ ಪ್ರಕರಣಗಳು ಕಂಡು ಬಂದಲ್ಲಿ‌ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವಂತೆ ತಿಳಿಸಿದರು.
ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಪ್ರಸಕ್ತ ವರ್ಷದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕಬೇಕಿದ್ದು, ಈ ನಿಟ್ಟಿನಲ್ಲಿ  ನೀತಿ ಸಂಹಿತೆ ಪೂರ್ವ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ತಕ್ಷಣದಿಂದಲೇ ಅಧಿಕಾರಿಗಳು ಮುಂದಾಗಬೇಕು.
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ನೀತಿಸಂಹಿತೆ ಪೂರ್ವದಲ್ಲಿಯೇ ಸಂಭವನೀಯ ಅಕ್ರಮಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ಚುನಾವಣಾ ಆಯೋಗ ಸೂಚನೆ ನೀಡಿದೆ.  ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಈಗಾಗಲೆ ಅಂತರರಾಜ್ಯ ಗಡಿ ಭಾಗಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಿ, ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ನಗದು, ಮದ್ಯ, ಮತ್ತಿತರ ಸಾಮಗ್ರಿಗಳ ಸಾಗಣೆ, ಸೇರಿದಂತೆ ಇಂತಹವುಗಳ ಮೇಲೆ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.
ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಅಧಿಕಾರಿ, ಸಿಬ್ಬಂದಿಗಳು ಯಾವುದೇ ಲೋಪದೋಷಗಳಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು.  ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ, ಅನುಮತಿ ರಹಿತ ಫಲಕಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಕೂಡಲೆ ತೆರವುಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸೀಮಾ ಲಾಟ್ಕರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯಿತ್ರಿ ಅಪರ ಜಿಲ್ಲಾಧಿಕಾರಿ‌ ಕವಿತಾ ರಾಜಾರಾಂ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.
Advertisements

LEAVE A REPLY

Please enter your comment!
Please enter your name here