ಕಳೆದ 2020ರಲ್ಲಿ ನಡೆದಿದ್ದ ಪ್ರತಿಭಟನೆಯಿಂದ ಸಾಕಷ್ಟು ಪಾಠ ಕಲಿತಿರುವ ರೈತರು ಇದೀಗ ಸಕಲ ಸಿದ್ಧತೆಗಳೊಂದಿಗೆ ದೆಹಲಿಗೆ ಪ್ರವೇಶ ಮಾಡುತ್ತಿದ್ದಾರೆ. ಈ ಬಾರಿ ರೈತರು ಕೇವಲ ಟ್ರಾಕ್ಟರ್ ಗಳ ಮೂಲಕ ಮಾತ್ರವಲ್ಲದೇ ಇತರೆ ವಾಹನಗಳ ಮೂಲಕವೂ ದೆಹಲಿಗೆ ಆಗಮಿಸುತ್ತಿದ್ದು, 6 ತಿಂಗಳ ರೇಷನ್, ಡೀಸೆಲ್, ಟ್ರಾಕ್ಟರ್ ಮಾತ್ರವಲ್ಲದೇ ಸೂಜಿಯಿಂದ ಹಿಡಿದು ಕಲ್ಲನ್ನೂ ಪುಡಿಗಟ್ಟಬಲ್ಲ ಬೃಹತ್ ಸುತ್ತಿಗೆಗಳು ಸೇರಿದಂತೆ ಸುಮಾರು 6 ತಿಂಗಳ ವರೆಗೂ ಬೇಕಾಗುವ ಎಲ್ಲ ವಸ್ತುಗಳೊಂದಿಗೆ ದೆಹಲಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ, ಫೆ. 13 – ಬೆಂಬಲ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ದೆಹಲಿ ಪ್ರತಿಭಟನೆಗೆ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸಕಲ ಸಿದ್ಧತೆಗಳೊಂದಿಗೆ ರೈತರು ರಾಜಧಾನಿ ದೆಹಲಿ ಗಡಿಯಲ್ಲಿ ಜಮಾಯಿಸುತ್ತಿದ್ದಾರೆ.
ಸಾವಿರಾರು ರೈತರು ದೀರ್ಘ ಪ್ರಯಾಣಕ್ಕೆ ಸಿದ್ಧರಾಗಿಯೇ ಆಗಮಿಸಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದ್ದು, ಈ ಹಿಂದೆ 2020ರಲ್ಲಿ ನಡೆದ ರೈತ ಪ್ರತಿಭಟನೆಯ ಮುಂದುವರಿದ ಭಾಗ ಎಂದೇ ಇದನ್ನು ಪರಿಗಣಿಸಲಾಗಿದೆ. ಅಂದು ರೈತರು ಸುಮಾರು 13 ತಿಂಗಳುಗಳ ಕಾಲ ಗಡಿಗಳಲ್ಲಿ ಕ್ಯಾಂಪ್ ಹೂಡಿದ್ದರು. ಇದೀಗ ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ.
ಸೂಜಿಯಿಂದ ಸುತ್ತಿಗೆಯವರೆಗೆ, ಕಲ್ಲುಗಳನ್ನು ಒಡೆಯುವ ಉಪಕರಣಗಳು ಸೇರಿದಂತೆ ನಮ್ಮ ಟ್ರಾಲಿಗಳಲ್ಲಿ ಬೇಕಾದ ಎಲ್ಲ ವಸ್ತುಗಳನ್ನು ತೆಗೆದುಕೊಂಡಿದ್ದೇವೆ. ನಾವು ಆರು ತಿಂಗಳ ಪಡಿತರದೊಂದಿಗೆ ನಮ್ಮ ಊರಿನಿಂದ ಹೊರಟಿದ್ದೇವೆ. ಹರ್ಯಾಣದ ನಮ್ಮ ಸಹೋದರರಿಗೂ ಬೇಕಾದಷ್ಟು ಡೀಸೆಲ್ ನಮ್ಮಲ್ಲಿ ಇದೆ” ಎಂದು ಪಂಜಾಬ್ ಮೂಲದ ರೈತರೊಬ್ಬರು ತಿಳಿಸಿದ್ದಾರೆ.
2020ರ ರೈತರ ಪ್ರತಿಭಟ ಭಾಗನೆಯಲ್ಲಿಯೂ ಭಾಗವಹಿಸಿದ್ದೆ ಎಂದು ಹೇಳಿದ ಅವರು, ತಮ್ಮ ಬೇಡಿಕೆಗಳು ಈಡೇರುವವರೆಗೂ ಈ ಬಾರಿ ಹಿಂದೆ ಸರಿಯುವುದಿಲ್ಲ. ಕಳೆದ ಬಾರಿ ನಾವು 13 ತಿಂಗಳುಗಳ ಕಾಲ ಪ್ರತಿಭಟನೆಯಿಂದ ಹಿಂದೆ ಸರಿದಿರಲಿಲ್ಲ. ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದೆವು. ಆದರೆ ಸರ್ಕಾರವು ತನ್ನ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಈ ಬಾರಿ ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ನಂತರವೇ ನಾವು ಅಲ್ಲಿಂದ ತೆರಳುತ್ತೇವೆ ಎಂದು ಅವರು ಪಂಜಾಬ್-ಹರ್ಯಾಣ ಗಡಿಯಿಂದ ದೆಹಲಿಯ ಕಡೆಗೆ ತೆರಳುತ್ತಾ ಅವರು ತಿಳಿಸಿದ್ದಾರೆ.