ಮೈಸೂರು,ಫೆ.13 – ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹನಂತಹ ಮೂರ್ಖ ಯಾರಿಲ್ಲ. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?, ಅವನಿಗೆ ತಂದೆ ಮುಖ್ಯಾನ, ತಾಯಿ ಮುಖ್ಯಾನ ಅಂತಾ ಕೇಳಿದ್ರೆ ಉತ್ತರ ಸಿಗುತ್ತಾ? ಶಿಕ್ಷಣದ ಜೊತೆ ಭಯ ಇರುವವರು ಮಾತ್ರ ಸತ್ಪ್ರಜೆ ಆಗಲು ಸಾಧ್ಯ. ಊಟ ಬೇಕಾ, ನೀರು ಬೇಕಾ ಅಂದ್ರೆ ಆಗುತ್ತಾ?. ನೀವು ಪಾರಂಪರಿಕ, ಐತಿಹಾಸಿಕ ಮೈಸೂರು ಸಂಸದ. ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪು ಚುಕ್ಕೆ ತರಬೇಡಿ. ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದರೆ, ಪ್ರತಾಪ್ ಸಿಂಹ ಸಮಸ್ಯೆಗೆ ಪರಿಹಾರ ಸಿಕ್ಕಾಗ ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂದು ಟಾಂಗ್ ಕೊಟ್ಟರು.
ಒಡೆಯರ್-ಟಿಪ್ಪು ಇಬ್ಬರೂ ಮಹನೀಯರು:
ಟಿಪ್ಪು ಎಕ್ಸ್‌ಪ್ರೆಸ್ ರೈಲು ಹೆಸರು ಬದಲಾವಣೆ ವಿಚಾರ ಮಾತನಾಡಿ, ಟಿಪ್ಪು ಎಕ್ಸ್‌ಪ್ರೆಸ್‌ಗೆ ಯಾವುದೇ ಹೆಸರಿಟ್ಟರೂ ಟಿಪ್ಪು, ಒಡೆಯರ್ ಕೊಡುಗೆ ಮರೆಮಾಚಲು ಸಾಧ್ಯವಿಲ್ಲ. ಪ್ರತಾಪ್‌ಸಿಂಹ ಸಂಸದನಾದ ಮೇಲೆ ಎಷ್ಟು ಹೊಸ ಟ್ರ್ಯಾಕ್, ಹೊಸ ರೈಲು, ಹೊಸ ಜಂಕ್ಷನ್ ತಂದಿದ್ದಾರೆ. ಆ ಕೆಲಸ ನಿಮ್ಮದಾ, ಅದನ್ನು ಮೊದಲು ಹೇಳಿ. ಒಡೆಯರ್-ಟಿಪ್ಪು ಇಬ್ಬರೂ ಮಹನೀಯರನ್ನು ನಾವು ಗೌರವಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಎಲ್ಲಾ ವಲಯದಲ್ಲಿ ವಿಫಲ:
ಹಿಜಾಬ್-ಕೇಸರಿ ಶಾಲು ವಿಚಾರವನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ. ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಅದನ್ನು ಮರೆಮಾಚಲು ಹಿಜಾಬ್ ವಿವಾದ ಎಳೆದು ತಂದಿದ್ದಾರೆ. ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯ ಕೇಳಬೇಕು. ಆದರೆ, ನಮ್ಮ ರಾಜ್ಯದಲ್ಲಿ ಉಲ್ಟಾ ಆಗಿದೆ.
ಹೆತ್ತವರಿಗೆ ಮಾತ್ರ ಮಕ್ಕಳ ನೋವು ಗೊತ್ತಾಗೋದು. ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗವನ್ನು ಒಟ್ಟಿಗೆ ಕೊಂಡೊಯ್ಯಬೇಕು. ನಿರ್ಭಯವಾಗಿ ವ್ಯಾಸಂಗ ಮಾಡಲು ಅವಕಾಶ ನೀಡಬೇಕು. ಕೂಡಲೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು ಎಂದರು. ಶಾಸಕ ರಘುಪತಿ ಭಟ್‌ಗೆ ಜೀವ ಬೆದರಿಕೆ ವಿಚಾರವಾಗಿ ಮಾತನಾಡಿ, ಯಾರು ಯಾರಿಗೂ ಬೆದರಿಕೆ ಹಾಕಬಾರದು. ಅವರಿಗೆ ರಕ್ಷಣೆ ಕೊಡಬೇಕು. ಅದರಂತೆ ಜನಪ್ರತಿನಿಧಿಗಳು ಕೂಡ ಸಮಸ್ಯೆಗಳನ್ನ ಪರಿಹರಿಸಬೇಕು. ಪರಿಹಾರದಲ್ಲಿ ಸಮಸ್ಯೆ ಸೃಷ್ಟಿಸುವವರು ಕೆಲವರಿದ್ದಾರೆ. ಶಿಕ್ಷಣ ನೀಡುವುದು ಪ್ರಾಥಮಿಕ ಜವಾಬ್ದಾರಿ ಎಂದರು.