ಅನುದಾನದ ವಿಷಯ ಮುಂದಿಟ್ಟು ಕಾಂಗ್ರೆಸ್ ದೇಶ ವಿಭಜಿಸುವ ಯತ್ನ: ರಾಜ್ಯಸಭೆಯಲ್ಲಿ ಮೋದಿ ವಾಗ್ದಾಳಿ

0
12

ನವದೆಹಲಿ, ,ಫೆ. 7 – ಅನುದಾನದ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶವನ್ನು ಉತ್ತರ-ದಕ್ಷಿಣವಾಗಿ ವಿಭಜಿಸುವ ಯತ್ನ ಮಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಸಂಸತ್ ನ ಬಜೆಟ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು, ಕಾಂಗ್ರೆಸ್ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರು ತೆರಿಗೆ ಹಂಚಿಕೆ ಹಾಗೂ ಅನುದಾನದ ವಿಷಯವಾಗಿ ನನ್ನ ತೆರಿಗೆ ನನ್ನ ಹಣ ಎನ್ನುತ್ತಿದ್ದಾರೆ ಇದು ಯಾವ ಭಾಷೆ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ದೇಶವನ್ನು ಇಬ್ಭಾಗ ಮಾಡುವ ವಾತಾವರಣ ಸೃಷ್ಟಿಸುತ್ತಿದೆ. ಇಂತಹ ಹೇಳಿಕೆಗಳು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶದ ಶತ್ರುಗಳಿಗೆ ಭೂಮಿಯನ್ನು ಬಿಟ್ಟುಕೊಟ್ಟಿತ್ತು. ಈಗ ಆಂತರಿಕ ಭದ್ರತೆ ಬಗ್ಗೆ ನಮಗೆ ಉಪದೇಶ ಮಾಡುತ್ತಿದೆ. ದೇಶ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಗೆ ಅರಿವು ಇತ್ತು. ಆದರೆ ಅದನ್ನು ಬಗೆಹರಿಸುವುದಕ್ಕೆ ಏನನ್ನೂ ಮಾಡಲಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.

ನಾನು ರಾಜ್ಯಸಭೆ, ಲೋಕಸಭೆಯಲ್ಲಿ ಅವರ ಮಾತು ಕೇಳಿದಾಗಲೆಲ್ಲಾ, ಕಾಂಗ್ರೆಸ್ ಹಾಗೂ ಅವರ ಚಿಂತನೆಗಳು ಅಪ್ರಸ್ತುತವಾಗಿದೆ ಎಂಬ ನನ್ನ ನಂಬಿಕೆ ಬಲಿಷ್ಠವಾಗುವುದು ಮುಂದುವರೆದಿದೆ. ಚಿಂತನೆಗಳು ಅಪ್ರಸ್ತುತವಾದಂತೆ ಅವರು ತಮ್ಮ ಕೆಲಸವನ್ನು ಹೊರಗುತ್ತಿಗೆ ನೀಡಿದ್ದಾರೆ. ಇಷ್ಟು ದೊಡ್ಡ ಪಕ್ಷ, ದೇಶವನ್ನು ದಶಕಗಳ ಕಾಲ ಆಳಿದ್ದ ಕಾಂಗ್ರೆಸ್ ಪಕ್ಷ ಇಂದು ಕುಸಿದಿದೆ. ಇದರಿಂದ ನಮಗೆ ಸಂತೋಷವಾಗಿಲ್ಲ. ನಮಗೆ ಕಾಂಗ್ರೆಸ್ ಬಗ್ಗೆ ಸಹಾನುಭೂತಿ ಇದೆ, ರೋಗಿಯೇ ಸುಧಾರಣೆ ಬಯಸದೇ ಇದ್ದಾಗ ವೈದ್ಯರೇನು ಮಾಡಲು ಸಾಧ್ಯ? ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 40 ಸ್ಥಾನಗಳಾದರೂ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here