ಬೆಂಗಳೂರು, ಫೆ. 5 – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ “100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸು (ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್) ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ಸಾರಿಗೆ ಘಟಕಗಳಿಗೆ 5,800 ಬಸ್‌ಗಳು ಸೇರ್ಪಡೆಯಾಗಲಿವೆ ಮತ್ತು ಕೆಎಸ್‌ಆರ್‌ಟಿಸಿ ಅನೇಕ ಪ್ರಯಾಣಿಕರ ಸ್ನೇಹಿ ಯೋಜನೆಗಳನ್ನು ತಂದಿದೆ ಎಂದರು.
ಈ ಅಶ್ವಮೇಧ ಬಸ್ಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್ಗಳಿಗೆ ಚಾಲನೆ ನೀಡಲಾಗಿದಈ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 52 ಸೀಟಿನ ಬಸ್ಸಿನ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೆಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಮಾಡಲಾಗಿದೆ.
KSRTC ಕಳೆದ ಡಿಸೆಂಬರ್ ಅಂತ್ಯದವರೆಗೆ 180 ಬಸ್‌ಗಳನ್ನು(153 ಡೀಸೆಲ್ ಮತ್ತು 27 ಎಲೆಕ್ಟ್ರಿಕ್) ಹೊಸದಾಗಿ ಪರಿಚಯಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 948 ಹೊಸ ಡೀಸೆಲ್ ಮತ್ತು 300 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಯೋಜಿಸಿದೆ.