ನವದೆಹಲಿ, ಜ. 31 – ಪಿಎಂ ಕೇರ್ಸ್ ನಿಧಿಯನ್ನು ಭಾರತದ ಸಂವಿಧಾನದ ಅಥವಾ ಸಂಸತ್ತು ಅಥವಾ ರಾಜ್ಯ ಶಾಸಕಾಂಗ ಮಾಡಿದ ಯಾವುದೇ ಕಾನೂನಿನಿಂದ ರಚಿಸಲಾಗಿಲ್ಲ ಎಂದು ಕೇಂದ್ರವು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (ಪಿಎಂ ಕೇರ್ಸ್) ನಿಧಿಯು ಸಾರ್ವಜನಿಕ ಪ್ರಾಧಿಕಾರವಲ್ಲ, ಇದು ಮಾಹಿತಿ ಹಕ್ಕು ಕಾಯ್ದೆ ಹಾಗೂ ಅದರ ನಿಬಂಧನೆಗಳ ಅಡಿ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಈ ಟ್ರಸ್ಟ್ ಯಾವುದೇ ಸರ್ಕಾರ ಅಥವಾ ಸರ್ಕಾರದ ಯಾವುದೇ ಸಾಧನದಿಂದ ಮಾಲೀಕತ್ವವನ್ನು ಹೊಂದಲು ಉದ್ದೇಶಿಸಿಲ್ಲ ಅಥವಾ ವಾಸ್ತವವಾಗಿ ನಿಯಂತ್ರಿಸುವುದಿಲ್ಲ ಅಥವಾ ಗಣನೀಯವಾಗಿ ಹಣಕಾಸು ಒದಗಿಸುವುದಿಲ್ಲ. ಟ್ರಸ್ಟ್‌ನ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ನೇರ ಅಥವಾ ಪರೋಕ್ಷವಾಗಿ ನಿಯಂತ್ರಣವನ್ನು ಹೊಂದಿಲ್ಲ ಎಂದು ಹೇಳಿದೆ.
ಪಿಎಂ ಕೇರ್ಸ್ ನಿಧಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಖಾತ್ರಿಗಾಗಿ ಸಂವಿಧಾನದಡಿ ಅದನ್ನು ‘ರಾಜ್ಯ’ ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಜುಲೈನಲ್ಲಿ ಕೇಂದ್ರವು ಸಲ್ಲಿಸಿದ ಒಂದು ಪುಟದ ಉತ್ತರದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದ ನಂತರ ಸರ್ಕಾರವು ಈ ವಿಷಯದಲ್ಲಿ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿತು.
ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರು, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಕೆಟಿ ಥಾಮಸ್ ಮತ್ತು ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ ಪಿಎಂ ಕೇರ್ಸ್ ಟ್ರಸ್ಟಿ ಮಂಡಳಿಯಲ್ಲಿದ್ದಾರೆ. ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರಿ ನಿಧಿಯಾಗಿ ಬಿಂಬಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದಿಸಿದರು.
ಆದಾಗ್ಯೂ, ಪಿಎಂ ಕೇರ್ಸ್ ನಿಧಿಯನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ ಎಂದು ಅಫಿಡವಿಟ್ ನಲ್ಲಿ ಕರೆಯಲಾಗಿದ್ದು, ಇದು ಕೇವಲ ಸ್ವಯಂಪ್ರೇರಿತ ದೇಣಿಗೆಗಳನ್ನು ಸ್ವೀಕರಿಸುತ್ತದೆ ಮತ್ತು ಇದು ಕೇಂದ್ರ ಸರ್ಕಾರದ ವ್ಯವಹಾರವಲ್ಲ, ಸರ್ಕಾರದಿಂದ ಯಾವುದೇ ಹಣಕಾಸು ಅಥವಾ ನಿಧಿಯನ್ನು ಸ್ವೀಕರಿಸಿಲ್ಲ ಎಂದು ತಿಳಿಸಲಾಗಿದೆ.
Advertisements