ಶಾರ್ಜಾದಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶ: ಸಂವಾದದಲ್ಲಿ ಸರ್ಜಾ ಸರ್ಕಾರದ ಅಲಿ ಸಯೀದ್ ಅಲ್ ಜರ್ವಾನ್

0
16

ಅಸ್ಸೋಚಾಮ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿದ್ದ ಸಂವಾದ

ಮೈಸೂರು,ಜ.19 – ಮೂಲ ಸೌಕರ್ಯಗಳನ್ನು ಒಳಗೊಂಡ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್) ಸರ್ಜಾ ಸರ್ಕಾರದ ಹಮ್ರಿಯಾ ಮುಕ್ತ ವಲಯ ಪ್ರಾಧಿಕಾರ (ಫ್ರೀ ಜೋನ್ ಅಥಾರಿಟಿ) ಉದಯೋನ್ಮುಖ ವ್ಯಾಪಾರಸ್ಥರ ಮುಕ್ತ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂದು ಯುಎಇ ಸರ್ಜಾ ಸರ್ಕಾರದ  ಹಮ್ರಿಯಾ ಫ್ರೀ ಜೋನ್ ಅಥಾರಿಟಿಯ ವಾಣಿಜ್ಯ ವ್ಯವಹಾರಗಳ ವಿಭಾಗದ ಉಪ ಕಾರ್ಯನಿರ್ವಾಹಕ ನಿರ್ದೇಶಕ ಅಲಿ ಸಯೀದ್ ಅಲ್ ಜರ್ವಾನ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಅಸ್ಸೋಚಾಮ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ) ಸಹಯೋಗದೊಂದಿಗೆ ಆಯೋಜಿಸಿದ್ದ ಯುಎಇ ನಲ್ಲಿ ಮುಕ್ತ ವ್ಯಾಪಾರ ಹೂಡಿಕೆಗೆ ಅವಕಾಶಗಳು ಕುರಿತ ಎರಡು ದಿನಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ೬೫೦೦ ಕ್ಕೂ ಹೆಚ್ಚು ಕಂಪನಿಗಳು ಸರ್ಜಾದಲ್ಲಿ ನೆಲೆಯೂರಿವೆ. ಅವುಗಳಲ್ಲಿ ಬಹುತೇಕ ಕಂಪನಿಗಳು ಭಾರತೀಯ ಮೂಲದವು ಎಂಬುದು ಶ್ಲಾಘನೀಯ ಎಂದರು.
ಭಾರತ ದೇಶದೊಂದಿಗೆ ಯುಎಇ ಉತ್ತಮ ಬಾಂಧವ್ಯ ಹೊಂದಿದ್ದು, ತೆರಿಗೆ ಪಾವತಿ ಇಲ್ಲದೆಯೇ ದೊಡ್ಡ ಮಟ್ಟದ ವ್ಯಾಪಾರ-ವಹಿವಾಟು ನಡೆಸಬಹುದಾಗಿದೆ. ಹಮ್ರಿಯಾ ಫ್ರೀ ಜೋನ್ ಅಥಾರಿಟಿಯಿಂದ ಅನುಮತಿ ಪಡೆದ ಕೆಲ ಗಂಟೆಗಳಲ್ಲಿಯೇ ವ್ಯಾಪಾರ-ವಹಿವಾಟು ಪ್ರಾರಂಭಿಸಬಹುದು. ಯುಎಇ ನಿಂದ ಇನ್ನಿತರೆ ದೇಶಗಳಲ್ಲಿಯೂ ವ್ಯಾಪಾರ ವಿಸ್ತರಣೆಗೆ ಹಮ್ರಿಯಾ ಸಹಕಾರ ನೀಡಲಿದೆ ಎಂದು ಮಾಹಿತಿ ನೀಡಿದರು.
ಹಮ್ರಿಯಾ ಮುಕ್ತ ವಲಯದ ವ್ಯಾಪಾರ ಅಭಿವೃದ್ಧಿ ಮುಖ್ಯಸ್ಥ ಜಿಯೋಮನ್ ಜಾರ್ಜ್ ಮಾತನಾಡಿ, ಹಮ್ರಿಯಾ ಮುಕ್ತ ವಲಯದಲ್ಲಿ ವ್ಯಾಪಾರ ಘಟಕವನ್ನು ಸ್ಥಾಪಿಸಲು ಭಾರತೀಯ ಕಂಪನಿಗಳಿಗೆ ಅತ್ಯಂತ ಆಕರ್ಷಕವಾದ ಸ್ಥಳವಾಗಿದೆ. ಹಮ್ರಿಯಾ ಮುಕ್ತ ವಲಯವನ್ನು ಆಫ್ರಿಕಾ ಮತ್ತು ಯುರೋಪ್‌ಗೆ ಮರು-ರಫ್ತು ಮೂಲವಾಗಿಯೂ ಬಳಸಿಕೊಳ್ಳಬಹುದು. ೩.೫ ಲಕ್ಷ ಭಾರತೀಯ ರೂಪಾಯಿಗಳಿಗಿಂತ ಕಡಿಮೆ ಪಾವತಿಸುವ ಮೂಲಕ, ಯಾವುದೇ ಕಂಪನಿಯು ಫ್ರೀ ಝೋನ್‌ನಲ್ಲಿ ಕಚೇರಿ ತೆರೆಯಬಹುದು. ವಿದ್ಯುತ್, ನೀರು ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಒದಗಿಸಲಿದ್ದು, ೨೫ ವರ್ಷಗಳ ಒಪ್ಪಂದ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಭಾರತಕ್ಕಿಂತ ಸರ್ಜಾದಲ್ಲಿ ತೆರಿಗೆ ಪ್ರಮಾಣ ಕಡಿಮೆ. ತೆರಿಗೆಗಳಿಂದ ಮುಕ್ತವಾಗಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶವಿದೆ. ಸ್ಟೋರೆಜ್ ವ್ಯವಸ್ಥೆ, ಉತ್ತಮ ರಸ್ತೆ ಸಾರಿಗೆ, ಸಮೀಪದಲ್ಲೇ ವಿಮಾನ ನಿಲ್ದಾಣ, ಪಕ್ಕದಲ್ಲೇ ಸಮುದ್ರ ಮಾರ್ಗವಿದ್ದು, ಹಲವು ದೇಶಗಳಿಗೆ ಸಂಪರ್ಕ ಕೊಂಡಿಯಾಗಿ ವ್ಯಾಪಾರ ನಡೆಸಬಹುದು. ಪ್ಲಗ್ ಅಂಡ್ ಪ್ಲೆ ಬಿಸಿನೆಸ್ ಮಾದರಿಯಲ್ಲಿ ವ್ಯಾಪಾರ ವಿಸ್ತರಿಸಬಹುದಾಗಿದೆ. ಮುಕ್ತ ವಲಯ ಸ್ಥಾಪನೆ ಹಾಗೂ ಮುಕ್ತ ವಲಯ ಕಂಪನಿ ನಡೆಸಲು ವಿಪುಲ ಅವಕಾಶವಿದೆ ಎಂದು ವ್ಯಾಪಾರಸ್ಥರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಮೈಸೂರಿನ ೧೦೦ಕ್ಕೂ ಹೆಚ್ಚು ಉದ್ಯಮಿಗಳು ಭಾಗವಹಿಸಿದ್ದರು.
ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಕೆ.ಬಿ.ಲಿಂಗರಾಜು, ಹಮ್ರಿಯಾ ಫ್ರೀ ಜೋನ್ ಅಥಾರಿಟಿ ಕಾನೂನು ಸಲಹೆಗಾರ ರೋಹಿತ್ ಕುಮಾರ್, ಅಸ್ಸೋಚಾಮ್ ಉಪ ನಿರ್ದೇಶಕ ಇರ್ಫಾನ್ ಆಲಂ, ಎಂಸಿಸಿಐಯ ಗೌರವ ಕಾರ್ಯದರ್ಶಿ ಶಿವಾಜಿ ರಾವ್‌. ಖಜಾಂಚಿ ಅಶೋಕ್‌, ಭಾರತಿ ಮುಂತಾದ ನೂರಾರು ಉದ್ಯಮಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here