ನವದೆಹಲಿ, ಜ.17 – ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜತೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಯಡಿಯೂರಪ್ಪ ಅವರೊಂದಿಗೆ ಪ್ರಧಾನಿ ಮೋದಿ ಸುಮಾರು 15 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾಕುತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಆದರೆ, ಯಾವ ವಿಚಾರಗಳ ಕುರಿತು ಇಬ್ಬರೂ ಮಾತುಕತೆ ನಡೆಸಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಈ ಬೆಳವಣಿಗೆಯು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್ ಏಕಾಏಕಿ ಕೆಳಗಿಳಿಸಿತು. ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರಿಗೆ ಜಾತಿಯ ಮಿತಿಯಲ್ಲದ ಬೆಂಬಲ ಇದೆ. ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ.
ಸ್ಥಾನಚ್ಯುತಿಯ ನಂತರ ಯಡಿಯೂರಪ್ಪ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ಮತ್ತೆ ಮುಖ್ಯ ಪಾತ್ರ ನೀಡಿತ್ತು. ಪಕ್ಷದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ನೇಮಿಸಲಾಯಿತು. ಸಂಸದೀಯ ಸಮಿತಿಗೆ ಸೇರ್ಪಡೆಗೊಂಡ ಬಳಿಕ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
2023 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗಳೆರಡಕ್ಕೂ ಬಿಜೆಪಿ ಮಿಷನ್ ಸೌತ್ ಅನ್ನು ಪ್ರಾರಂಭಿಸಿದೆ,
ದಕ್ಷಿಣ ರಾಜ್ಯಗಳಲ್ಲಿ ಗೆಲುವಿನ ತಂತ್ರ ರೂಪಿಸುವ ಎಲ್ಲಾ ಪ್ರಯತ್ನಗಳ ನಡುವೆ ಬಿಜೆಪಿಯ ಪ್ರಧಾನ ಗಮನ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವತ್ತ ಇದೆ. ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ತಂತ್ರವು ನಿರ್ಣಾಯಕವಾಗಿರಲಿದೆ.
“ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪಾತ್ರವು ಹೆಚ್ಚಿನ ಜವಾಬ್ದಾರಿಗಳೊಂದಿಗೆ ಇರಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
“ರಾಜ್ಯದ ಪ್ರಸ್ತುತ ನಾಯಕತ್ವದೊಂದಿಗೆ ಪಕ್ಷದ ಕೇಂದ್ರ ನಾಯಕತ್ವವು ಬದಲಾಗಬಹುದು ಅಥವಾ ಬದಲಾಗದೆ ಇರಬಹುದು. ಆದರೆ, ಯಡಿಯೂರಪ್ಪ ಅವರ ರಾಜಕೀಯ ಅನುಭವ ಮತ್ತು ವಿಭಾಗಗಳ ಮೇಲಿನ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.
Advertisements